ಆರ್ ಆರ್ ನಗರ ಚುನಾವಣಾ ಫಲಿತಾಂಶ 2023: ಮತ್ತೊಂದು ಗೆಲುವು ಸಾಧಿಸ್ತಾರ ಮುನಿರತ್ನ? ಕುಸುಮಾಗೆ ಸಿಗುತ್ತಾ ರಾಜರಾಜೇಶ್ವರಿ ಆಶೀರ್ವಾದ
ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಒಂದು ತಿಂಗಳ ಭರ್ಜರಿ ಪ್ರಚಾರದ ಬಳಿಕ ಎಲ್ಲಾ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಹಲವು ನಾಯಕರು ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿ ಶಾಸಕ ಮುನಿರತ್ನ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾ ಹನುಮಂತರಾಯಪ್ಪ ಸ್ಪರ್ಧೆ ಮಾಡಿದ್ದು, ಜನಾಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಈ ಬಾರಿ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕೆಂದು ಭರ್ಜರಿ ಪ್ರಚಾರ ಮಾಡಿದ್ದಾರೆ. 2018ರ ಚುನಾವಣೆ ಸಂದರ್ಭದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಆದರೂ ಮುನಿರತ್ನ ಗೆಲುವು ಸಾಧಿಸಿದ್ದರು.

ಒಕ್ಕಲಿಗರ ಪಾಬಲ್ಯ ಇರುವ ಕ್ಷೇತ್ರದಲ್ಲಿ ಮುನಿರತ್ನ ಪ್ರಾಬಲ್ಯ ಸಾಧಿಸಿದ್ದಾರೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸಿಗೆ ಗೆಲುವು ಸಿಕ್ಕಿದೆ. 2008ರಲ್ಲಿ ಬಿಜೆಪಿಯ ಎಂ. ಶ್ರೀನಿವಾಸ್ ಗೆದ್ದಿದ್ದರು. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಮುನಿರತ್ನ ಗೆಲುವು ಸಾಧಿಸಿದ್ದರು, ಆಪರೇಷನ್ ಕಮಲಕ್ಕೆ ಒಳಗಾಗಿ 2019ರಲ್ಲಿ ಬಿಜೆಪಿ ಸೇರಿದ್ದ ಅವರು ಶಾಸಕ ಸ್ಥಾನ ನೀಡಿದ್ದರು, 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು, ಕಾಂಗ್ರೆಸ್‌ನ ಕುಸುಮಾ ಹನುಮಂತರಾಯಪ್ಪ ಸೋಲು ಕಂಡಿದ್ದರು.
ಜಾಲಹಳ್ಳಿ, ಲಗ್ಗೆರೆ, ಮತ್ತಿಕೆರೆ, ಜೆಪಿ ಪಾರ್ಕ್, ಯಶವಂತಪುರ, ಲಕ್ಷ್ಮೀದೇವಿ ನಗರ, ಪೀಣ್ಯ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಕೆಂಗುಂಟೆ, ಜ್ಞಾನಭಾರತಿ, ರಾಜರಾಜೇಶ್ವರಿ ನಗರವನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಕಾರ್ಮಿಕರೇ ಹೆಚ್ಚಿನ ಮತದಾರರಾಗಿದ್ದಾರೆ.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿದ್ದ ರಾಜರಾಜೇಶ್ವರಿ ನಗರ, 2018ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ನಂತರ ಹೊಸ ಕ್ಷೇತ್ರವಾಯಿತು, ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಹೆಚ್ಚಿನ ವಾರ್ಡ್‌ಗಳು ಇರುವ ಕಾರನ ಕಾರ್ಮಿಕ ಸಮುದಾಯ ಹಾಗೂ ಕೆಳ ಮಧ್ಯಮ ವರ್ಗದ ಮತದಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಲಮ್‌ಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು ತೆಲುಗು, ತಮಿಳು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 4,78,300 ಮತದಾರರನ್ನು ಹೊಂದಿದ್ದು, ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿದ್ದಾರೆ. ಒಕ್ಕಲಿಗರು 1,25,000, ಲಿಂಗಾಯತರು 49,000, ಬ್ರಾಹ್ಮಣರು 32,000, ಎಸ್‌ಸಿ-ಎಸ್‌ಟಿ 82,000, ಮುಸ್ಲಿಂ 15,000, ಕುರುಬ 6,000, ದೇವಾಂಗ 5,000 ರಷ್ಟು ಇದ್ದಾರೆ. ತಮಿಳು 45,000, ತೆಲುಗು 43,000 ಭಾಷಿಕ ಮತದಾರರಿದ್ದು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೆ ಈ ಬಾರಿ ಕೂಡ ಇಲ್ಲಿ ಶೇಕಡಾ 48.3 ರಷ್ಟು ಮತದಾನವಾಗಿದ್ದು, ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications