RR ನಗರ ಚುನಾವಣೆ ಮುಂದೂಡಿಕೆ, ನನ್ನ ವಿರುದ್ಧ ಷಡ್ಯಂತ್ರ: ಮುನಿರತ್ನ
ಬೆಂಗಳೂರು, ಮೇ 11: ರಾಜರಾಜೇಶ್ವರಿ ನಗರ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 'ಇದು ನನ್ನ ವಿರುದ್ಧ ಷಡ್ಯಂತ್ರ' ಎಂದಿದ್ದಾರೆ.
ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಚುನಾವಣೆ ಮುಂದೂಡಿರುವುದು ಸರಿಯಾದ ಕ್ರಮವಲ್ಲ, ಇದು ನನ್ನ ವಿರುದ್ಧ ಬಿಜೆಪಿ ಮಾಡಿರುವ ಷಡ್ಯಂತ್ರ, ನನ್ನದಲ್ಲದ ತಪ್ಪಿಗಾಗಿ ಚುನಾವಣೆಯನ್ನು ಮುಂದೂಡಲಾಗಿದೆ' ಎಂದು ಅವರು ಹೇಳಿದ್ದಾರೆ.
ಚುನಾವಣೆಯಿಂದ ಹಿಂದೆ ಸರಿ ಎಂದು ನೇರವಾಗಿ ಕೇಳಿದ್ದರೆ ನಾನು ಹಿಂದೆ ಸರಿದುಬಿಡುತ್ತಿದ್ದೆ, ಆದರೆ ಹೀಗೆಲ್ಲಾ ಮಾಡಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನನಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಕ್ಕಿರುವ ವೋಟರ್ ಐಡಿಗಳು ನಕಲಿಯಲ್ಲ ಎಂದು ಆಯೋಗವೇ ಹೇಳಿದೆ. ಅಲ್ಲದೆ ಆ ಏರಿಯಾದ ಕಾರ್ಪೊರೇಟರ್ ಬಿಜೆಪಿಯವರು, ಘಟನೆ ನಡೆದ ಅಪಾರ್ಟ್‌ಮೆಂಟ್ ಬಿಜೆಪಿಯವರದ್ದು, ಘಟನೆ ನಡೆಯುವ ಮುಂಚೆ ಅಲ್ಲಿ ಇದ್ದದ್ದು ಬಿಜೆಪಿಯವರು, ಕೇವಲ ನನ್ನ ಒಂದು ಕರಪತ್ರ ಅಲ್ಲಿ ಸಿಕ್ಕಿತೆಂದು ನನ್ನನ್ನು ಹೊಣೆಗಾರನನ್ನಾಗಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಅವರು ನನ್ನ ಮೇಲೆ ವೈಯಕ್ತಿಕ ದ್ವೇಷ ಬೆಳೆಸಿಕೊಂಡಂತಿದ್ದಾರೆ ಎಂದ ಮುನಿರತ್ನ ಅದಕ್ಕೆಂದೇ ಅವರು ಕ್ಷೇತ್ರಕ್ಕೆ ಎರಡು ಬಾರಿ ಬಂದರು. ಅಲ್ಲದೆ ಅವರ ಮುಂದಾಳತ್ವದಲ್ಲೇ ಹೀಗೆಲ್ಲಾ ಘಟನೆಗಳು ನಡೆಯುತ್ತಿವೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಕಂಟೇನರ್‌ನಲ್ಲಿ ನನ್ನ ಭಾವಚಿತ್ರ ಇರುವ 5000 ಟಿ-ಶರ್ಟ್ ಸಿಕ್ಕಿತೆಂದು ಆಯೋಗ ಚುನಾವಣೆ ಮುಂದೂಡುತ್ತಿದೆ ಆದರೆ ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅಂದೇ ನಾನು ಹೇಳಿದ್ದೆ ಕಂಟೇನರ್‌ನಲ್ಲಿರುವುದು ರಿಲಯನ್ಸ್‌ನ ಗೂಡ್ಸ್ ಅದರ ಬಗ್ಗೆ ರಶೀದಿ ಕೂಡಾ ಇದೆ ಎಂದರು ಸಹ ಕೇಳಿಸಿಕೊಳ್ಳದೆ ನನ್ನನ್ನು ಆರೋಪಿಯನ್ನಾಗಿಸಲಾಯಿತು.
ಅಲ್ಲದೆ ವಶಪಡಿಸಿಕೊಂಡ 5000 ಟಿ-ಶರ್ಟ್‌ಗೆ ರೂ.95,00,000 ಮೌಲ್ಯ ಹಾಕಲಾಗಿದೆ ಇದೆಲ್ಲಾ ಅನ್ಯಾಯ ಅಲ್ಲವಾ?, ಹೀಗೆಲ್ಲಾ ಮಾಡಿ ನನಗೆ ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂದು ಮುನಿರತ್ನ ಆಕ್ರೋಶದಿಂದ ನುಡಿದರು.
ಚುನಾವಣಾ ಆಯೋಗವು ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಿದ್ದು ಫಲಿತಾಂಶ ಇದೇ ತಿಂಗಳು 31ಕ್ಕೆ ಬರಲಿದೆ.












Click it and Unblock the Notifications