ಬೆಂಗಳೂರು: ರೋಜಗಾರ್ ಯೋಜನೆ ಅಡಿ ನೇಮಕಾತಿ ಪತ್ರ ವಿತರಿಸಿದ ಪ್ರಲ್ಹಾದ್ ಜೋಶಿ
ನವದೆಹಲಿ, ಅಕ್ಟೋಬರ್ 22: ಭಾರತದಲ್ಲಿ ಸರ್ಕಾರಿ ನೌಕರಿ ಕನಸು ಕಾಣುತ್ತಿದ್ದ ಯುವಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ 75,000 ನಿರುದ್ಯೋಗಿಗಳಿಗೆ ರೋಜಗಾರ್ ಯೋಜನೆ ಅಡಿ ಸರ್ಕಾರವು ನೇಮಕಾತಿ ಪ್ರಮಾಣಪತ್ರವನ್ನು ವಿತರಿಸಿದೆ.
ಬೆಂಗಳೂರಿನಲ್ಲೂ ರೋಜಗಾರ್ ಮೇಳ ನಡೆದಿದ್ದು, ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಯುವಕರಿಗೆ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನೇಮಕಾತಿ ಪತ್ರವನ್ನು ವಿತರಿಸಿದರು. ಈ ಯೋಜನೆಯಡಿ ನೇಮಕಗೊಂಡ ಯುವಕರಿಗೆ ಶುಭ ಕೋರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಅಶ್ವಥ್ ನಾರಾಯಣ್, ಸಂಸದ ಪಿ.ಸಿ ಮೋಹನ್ ಹಾಗೂ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

10 ಲಕ್ಷ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆ:
ಭಾರತದ 10 ಲಕ್ಷ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆ ನೀಡಿರುವ ಪ್ರಧಾನಿ ಮೋದಿ, ಅದನ್ನು ಶೀಘ್ರದಲ್ಲಿಯೇ ನೆರವೇರಿಸಲಿದ್ದಾರೆ. ಇದರ ಮೊದಲ ಹಂತವಾಗಿ ಇಂದು 75,000 ಯುವಕರಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ಮೋದಿ ಅವರು ಖುದ್ದಾಗಿ ವರ್ಚುವಲ್ ವೇದಿಕೆಯ ಮೂಲಕ ಹಸ್ತಾಂತರಿಸಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹೊಸ ಉದ್ಯೋಗಗ ಸೃಷ್ಟಿಸುವತ್ತ ಹೆಜ್ಜೆ:
ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗಳನ್ನು ಮಾಡುವತ್ತ ಮಹತ್ತರ ಹೆಜ್ಜೆಗಳನ್ನು ಇಟ್ಟಿದ್ದಾರೆ. ಒಬ್ಬ ದೂರ ದೃಷ್ಟಿಯುಳ್ಳ ನಾಯಕ ದೇಶದ ಅಭಿವೃದ್ಧಿಗಾಗಿ ಯಾವ ರೀತಿ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಇದೇ ಉದಾಹರಣೆಯಾಗಿದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
75,000 ಉದ್ಯೋಗಾಕಾಂಕ್ಷಿಗಳಿಗೆ ಆಫರ್ ಲೆಟರ್:
ರೋಜಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 75,000 ಉದ್ಯೋಗಾಕಾಂಕ್ಷಿಗಳಿಗೆ ವಿದ್ಯುನ್ಮಾನವಾಗಿ ನೇಮಕಾತಿ ಪತ್ರಗಳನ್ನು ಕಳುಹಿಸಿದರು. ದೇಶದಾದ್ಯಂತ ಭಾರತ ಸರ್ಕಾರದ 38 ಸಚಿವಾಲಯಗಳು ಅಥವಾ ಇಲಾಖೆಗಳಿಗೆ ಈ ಹೊಸ ನೇಮಕಾತಿಗಳು ಸಂಬಂಧಿಸಿವೆ. ಅವರಲ್ಲಿ ಗ್ರೂಪ್ ಎ ಮತ್ತು ಬಿ (ಗೆಜೆಟೆಡ್), ಗ್ರೂಪ್ ಬಿ (ನಾನ್ ಗೆಜೆಟೆಡ್) ಮತ್ತು ಸಿ ಗುಂಪಿನಲ್ಲಿ ವಿವಿಧ ಹಂತಗಳಲ್ಲಿ ಸರ್ಕಾರಿ ನೌಕರಿಯನ್ನು ಪಡೆದುಕೊಂಡಿದ್ದಾರೆ.












Click it and Unblock the Notifications