Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರು ಗಮನಿಸಲೇಬೇಕಾದ ಬಹುಮುಖ್ಯ ಮಾಹಿತಿ
Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಉದ್ಘಾಟನೆ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿದೆ. ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ವಾಹನ ಸವಾರರು ಗಮನಿಸಲೇಬೇಕಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
119 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ 8,408 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಯಾದ ಆರಂಭದಲ್ಲಿ ಟೋಲ್ ವಿಚಾರವಾಗಿ ಅಲ್ಲಿನ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಮಾರಾಮಾರಿಯೂ ನಡೆದಿವೆ. ಬಳಿಕವೂ ಸಹ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.

ಸದ್ಯ ಇದೀಗ ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪ್ರತಿದಿನ ಲಕ್ಷ ಲೆಕ್ಕದಲ್ಲಿ ಪ್ರಯಾಣಿಕರು ಪ್ರಯಾಣ ಮಾಡುತ್ತಿರುತ್ತಾರೆ. ಅದರಲ್ಲೂ ರಾತ್ರಿ ವೇಳೆ ವಾಹನಗಳು ತುಸು ಜಾಸ್ತಿ ಇರುತ್ತವೆ. ಇಂತಹ ಈ ಎಕ್ಸ್‌ಪ್ರೆಸ್ ವೇನಲ್ಲಿ ಇದೀಗ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಸಂಚಾರ ಮಾಡೋದೇ ತುಂಬಾ ಕಷ್ಟವಾಗುತ್ತಿದೆ ಎಂದು ವಾಹನ ಸವಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರು-ಮೈಸೂರಿಗೆ ಕಡಿಮೆ ಸಮಯದಲ್ಲಿ ಪ್ರಯಾಣ ಮಾಡಲು ಹೇಳಿ ಮಾಡಿಸಿದ ಎಕ್ಸ್‌ಪ್ರೆಸ್ ಇದಾಗಿದೆ. ಆದರೆ, ಸುರಕ್ಷಿತವಲ್ಲ. ಇಲ್ಲಿ ಕಳ್ಳ-ಕಾಕರ ಕಾಟ ಹೆಚ್ಚಾಗಿದ್ದು, ರಾತ್ರಿ ವೇಳೆ ಸಂಚಾರ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ. ಪ್ರಯಾಣಿಕರಿಗೆ ರಕ್ಷಣೆಯೇ ಇಲ್ಲವಾ ಎಂದು ವಾಹನ ಸವಾರರು ಪ್ರಶ್ನೆ ಮಾಡುತ್ತಿದ್ಧಾರೆ. ಇದು ಇವತ್ತಿನದಲ್ಲ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತವಾದಾಗಿನಿಂದಲೂ ಸಹ ಕಳ್ಳರ ಕಾಟ ಹೆಚ್ಚಾಗಿಬಿಟ್ಟಿದೆ. ಇದಕ್ಕೆ ನಿಯಂತ್ರಣ ಹಾಕಬೇಕು ಎಂದುನ ಅಧಿಕಾರಿಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.
ರಾತ್ರಿ ವೇಳೆ ಇಲ್ಲಿ ಕಳ್ಳರ ಗುಂಪೊಂದು ಆಗಮಿಸುತ್ತದೆ. ಈ ವೇಳೆ ವಿಶ್ರಾಂತಿದೆಂದು ವಾಹನ ನಿಲ್ಲಿಸಿದ ಪ್ರಯಾಣಿಕರನ್ನು ಗುರಿಯಾಗಿಸಿ, ದರೋಡೆ ಮಾಡುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಇದುವರೆಗೂ ಇಲ್ಲಿ ಒಟ್ಟು 27 ದರೋಡೆ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15, ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ 12 ಪ್ರಕರಣಗಳು ದಾಖಲಾಗಿವೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ.
ತಮಿಳುನಾಡು ಮೂಲದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಅಕ್ಟೋಬರ್ 7ರ ಬೆಳಗ್ಗಿನ ನುಸುಕಿನ ಜಾವ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯ ಬಳಿ ವಿಶ್ರಾಂತಿಂದು ಕಾರು ನಿಲ್ಲಿಸಿದ್ದರು. ಈ ವೇಳೆ ಮೂವರು ಕಳ್ಳರ ಗ್ಯಾಂಗ್ ಪಿಎಸ್‌ಐ ಮೇಲೆ ದಾಳಿ ನಡೆಸಿ ಅವರ ಬಳಿಯ ಚಿನ್ನ, ನಗದು ಹಾಗೂ ಮೊಬೈಲ್ ಎಗರಿಸಿ ಪರಾರಿ ಆಗಿದ್ದರು. ಬಳಿಕ ಅದೇ ಸ್ಥಳದಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಎನ್‌ಎಚ್‌ಎಐ ತನ್ನ ಯೋಜನೆಯಂತೆ ಕೇವಲ ರಸ್ತೆಯನ್ನು ಮಾತ್ರ ನಿರ್ಮಾಣ ಮಾಡಿದೆ. ಆದರೆ, ಮೂಲಸೌಲಭ್ಯಗಳನ್ನು ನಿರ್ಮಾಣ ಮಾಡದೆ ಇರುವುದೇ ಈ ಘಟನೆಗಳಿಗೆ ಮುಖ್ಯ ಕಾರಣವಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇಲ್ಲಿ ಒಂದೇ ಒಂದು ಶೌಚಾಲಯ, ವಿಶ್ರಾಂತಿ ಸ್ಥಳ, ಹೋಟೆಲ್‌ಗಳಿಲ್ಲ. ಪರಿಣಾಮ ವಾಹನ ಸವಾರರು ರಸ್ತೆ ಬದಿಯಲ್ಲೇ ನಿಂತು ವಿಶ್ರಾಂತಿ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಅಮಾಯಕ ಜನರನ್ನು ಯಾಮಾರಿಸಿ ದರೋಡೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕಂದ್ರೆ, ಪ್ರಾಧಿಕಾರ ಎಕ್ಸ್‌ಪ್ರೆಸ್‌ವೇನ ಅಲ್ಲಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ವಾಹನ ಸವಾರರ ಬೇಡಿಕೆಯಾಗಿದೆ.












Click it and Unblock the Notifications