ಬ್ಯಾನರ್‌ನಲ್ಲಿ ಪುನೀತ್ ರಾಜಕುಮಾರ್ ಅವರ ಚಿತ್ರ ಹುಡುಕಿಕೊಡಿ!: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ನಟ ಪುನೀತ್ ರಾಜ್‌ಕುಮಾರ್ ಹೆಸರನ್ನು ರಸ್ತೆಗೆ ಮರುನಾಮಕರಣ ಮಾಡುತ್ತೇವೆ ಎಂದು ಹಾಕಿಸಿದ್ದ ಬ್ಯಾನರ್‌ಗಳಲ್ಲಿ ಅಪ್ಪು ಫೋಟೋಗೆ ಜಾಗವೇ ಇಲ್ಲ!
ಬೆಂಗಳೂರು, ಫೆಬ್ರವರಿ. 07: ರಾಜ್ಯ ಸರ್ಕಾರ ನಟ ಡಾ. ಪುನೀತ್ ರಾಜಕುಮಾರ್ ಅವರ ನೆನಪಿಗೆ ಫೆಬ್ರವರಿ 7 ರ ಮಂಗಳವಾರ ನಗರದ ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಅವರ ಹೆಸರನ್ನು ಮರು ನಾಮಕರಣ ಮಾಡುತ್ತಿದೆ.
ಇದು ರಾಜ್ಯದ ಜನರಿಗೆ ಖುಷಿ ಕೊಡುವ ಸುದ್ದಿಯಾಗಿದ್ದರೂ, ಈ ಸಮಾರಂಭವನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಗಳು ಕೇಳಬಂದಿವೆ. ಅಪ್ಪು ಅಭಿಮಾನಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಅವರೇ ಇಲ್ಲ.
ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಸಮಾರಂಭದ ಬ್ಯಾನರ್‌ನಲ್ಲಿ ಪುನೀತ್ ರಾಜಕುಮಾರ್ ಅವರೇ ಇಲ್ಲ!@RAshokaBJP ಅವರೇ, ಈ ಬ್ಯಾನರ್‌ನಲ್ಲಿ ಪುನೀತ್ ರಾಜಕುಮಾರ್ ಅವರ ಚಿತ್ರ ಹುಡುಕಿಕೊಡಿ! pic.twitter.com/3PxgfBEW1O
— Karnataka Congress (@INCKarnataka) February 7, 2023
ಹೌದು, ಸಿನಿಮಾ ಸೇರಿದಂತೆ ಸಾಮಾಜಿಕ ಕಾರ್ಯಗಖ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿರುವ ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಅವರ ಹೆಸರು ಚಿರಸ್ಥಾಯಿಯಾಗುವಂತೆ ಮಾಡಲು ಸರ್ಕಾರ ಈ ಕೆಲಸ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದರು. ಆದರೆ, ಸಮಾರಂಭದ ಹೆಸರಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ರಾಜಕೀಯ ನಾಯಕರೇ ತುಂಬಿದ್ದಾರೆ. ಎಲ್ಲೂ ಪುನೀತ್ ರಾಜ್‌ಕುಮಾರ್ ಫೋಟೋ ಹಾಕಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ಫೋಟೋಗಳು ಇವೆ. ಆದರೆ ಯಾರ ಹೆಸರಲ್ಲಿ ಸಮಾರಂಭ ನಡೆಯುತ್ತಿದೆಯೋ ಅವರ ಫೋಟೋವೇ ಕಾಣೆಯಾಗಿದೆ. ಉದ್ಘಾಟನೆ ಬಳಿಕ ನಡೆಯಲಿರುವ ಸಂಗೀತ ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿಯೂ ಪುನೀತ್ ರಾಜ್‌ಕುಮಾರ್ ಫೋಟೋ ಕಾಣೆಯಾಗಿದೆ.
ಕಾಂಗ್ರೆಸ್ ಕೂಡ ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಕಿಡಿಕಾರಿದ್ದು, ಬ್ಯಾನರ್‌ನಲ್ಲಿ ಪುನೀತ್ ರಾಜಕುಮಾರ್ ಅವರ ಚಿತ್ರ ಹುಡುಕಿಕೊಡಿ! ಎಂದು ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಸಮಾರಂಭದ ಬ್ಯಾನರ್‌ನಲ್ಲಿ ಪುನೀತ್ ರಾಜಕುಮಾರ್ ಅವರೇ ಇಲ್ಲ! ಸಚಿವ ಆರ್. ಅಶೋಕ್ ಅವರೇ, ಈ ಬ್ಯಾನರ್‌ನಲ್ಲಿ ಪುನೀತ್ ರಾಜಕುಮಾರ್ ಅವರ ಚಿತ್ರ ಹುಡುಕಿಕೊಡಿ!" ಎಂದು ಟೀಕಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಸರ್ಕಾರದ ಕೆಲಸವನ್ನು ಟೀಕಿಸಿದ್ದಾರೆ. "ಈಗಾಗಲೇ ಪುನೀತ್ ಅವರ ಹೆಸರನ್ನೇ ಇಟ್ಟಿದ್ದರು. ಈಗ ಚುನಾವಣೆ ದೃಷ್ಟಿಯಿಂದ ಮತ್ತೆ ಪುನೀತ್ ರಾಜ್ಕುಮಾರ್ ರಸ್ತೆ ಎಂದು ನಾಮಕರಣ ಮಾಡುತ್ತಿದ್ದಾರೆ. ಅದು ಅತ್ಲಾಗಿರಲಿ...ಈ ಫ್ಲೆಕ್ಸ್ ನಲ್ಲಿ ಪುನೀತ್ ಅವರ ಫೋಟೋನೇ ಇಲ್ಲ ಸಿವಾ." ಎಂದು ಫೇಸ್‌ಬುಕ್ ಬಳಕೆದಾರರು ಆರೋಪಿಸಿದ್ದಾರೆ.
ಲೋಕೇಶ್ ಗೌಡ ಮಂಡ್ಯ ಎಂಬ ಫೇಸ್‌ಬುಕ್ ಬಳಕೆದಾರರು, "ನೋಡಿ ನಮ್ಮ ರಾಜ್ಯ ಸರ್ಕಾರದ ಅವಾಂತರ ಅಧಿಕಾರದ ದರ್ಪ ಹೆಸರಿಗೆ ಪುನೀತ್ ರಾಜ್ಕುಮಾರ್ ರಸ್ತೆ ಇಡುತ್ತಾರಂತೆ ಆದರೆ ಬ್ಯಾನರ್ ಮೇಲೆ ಪುನೀತ್ ರಾಜ್‌ಕುಮಾರ್ ಮಾಯ! ನಾಚಿಕೆಯಾಗಬೇಕು ಇವರ ಶೋಕಿಗೆ ನಾವಂತು ಇದನ್ನು ನೋಡಿ ಸುಮ್ಮನೆ ಕೂತಿಲ್ಲ ಕೂಡಲೇ ಬ್ಯಾನರ್ ಮೇಲೆ ಅಪ್ಪು ಫೋಟೋ ಅಂಟಿಸಿದ್ದೇವೆ.. ಅಪ್ಪುವಿಗೆ ಅವಮಾನಿಸಿದ ಇಂತಹ ನಾಚಿಗೆಕೆಟ್ಟ ಸರ್ಕಾರಕ್ಕೆ ಧಿಕ್ಕಾರವಿರಲಿ...!" ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ಚುನಾವಣೆ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರನ್ನು ಬಳಸಿಕೊಂಡು ಬಿಜೆಪಿ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಅಪ್ಪು ಅಭಿಮಾನಿಗಳು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.











Click it and Unblock the Notifications