ಕೆಎಸ್ಆರ್‌ಟಿಸಿ ನೌಕರರಿಗೆ ಅಪಘಾತ ಪರಿಹಾರದ ಮೊತ್ತ ಪರಿಷ್ಕರಣೆ
ಬೆಂಗಳೂರು, ನವೆಂಬರ್ 21: ಕೆಎಸ್ಆರ್‌ಟಿಸಿ ನೌಕರರಿಗೆ ಅಪಘಾತ ಪರಿಹಾರದ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ಸೇವೆಯಲ್ಲಿರುವಾಗ ಸಿಬ್ಬಂದಿ ಖಾಸಗಿ ಅಥವಾ ಕರ್ತವ್ಯ ನಿರತರಾಗಿರುವಾಗ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಕರಾರಸಾ ನಿಗಮದ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತ ರೂ. 50.00 ಲಕ್ಷಗಳನ್ನು ನೀಡಲು ನಿಗಮ ಮುಂದಾಗಿದೆ.
ವಾರ್ಷಿಕ ಸರಾಸರಿ 15ಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ನೌಕರರು ಅಪಘಾತದಿಂದ ಮರಣ ಹೊಂದುವ ಪ್ರಕರಣಗಳು ನಿಗಮದಲ್ಲಿ ದಾಖಲಾಗುತ್ತಿದೆ. ಹೀಗಾಗಿ ನೌಕರರ ಅವಲಂಬಿತರಿಗೆ ಹೆಚ್ಚಿನ ನೆರವು ನೀಡುವ ಉದ್ದೇಶದಿಂದ ಒಂದು ವರ್ಷದ ಅವಧಿಗೆ ಯುನೈಟೆಡ್ ಇಂಡಿಯ ಇನ್ಸುರೆನ್ಸ್ ಕಂಪನಿಯವರೊಂದಿಗೆ 50.00 ರೂ ಲಕ್ಷಗಳ (ಐವತ್ತು ಲಕ್ಷ ರೂಪಾಯಿಗಳು) ಪರಿಹಾರ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಕಳೆದ ವರ್ಷದಿಂದ ಆರಂಭವಾದ ಈ ಇನ್ಸುರೆನ್ಸ್‌ನ ಸದ್ಯ ಒಂದು ವರ್ಷದ ಅವಧಿ ಮುಗಿದೆ.

ಈ ಹಿನ್ನೆಲೆಯಲ್ಲಿ ಹಾಗೂ ಸೇವಾವಧಿಯಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ನೌಕರರಿಗೆ ಅಪಘಾತ ಪರಿಹಾರದ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ಮೃತಪಟ್ಟ ನೌಕರರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿ, ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ನೌಕರರ ಕುಟುಂಬ ಕಲ್ಯಾಣ ಯೋಜನೆಯನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
* ಅಪಘಾತದಿಂದ (ಕರ್ತವ್ಯ ನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಸಿಬ್ಬಂದಿ ಮರಣ ಹೊಂದಿದ ಪ್ರಕರಣಗಳಲ್ಲಿ ಮಾತ್ರ ಮೃತರ ನಾಮನಿರ್ದೇಶಿತರಿಗೆ ರೂ. 50.00 ಲಕ್ಷಗಳ (ಐವತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತವನ್ನು ನೀಡುವುದು.
* ಅಪಘಾತ ಹೊರತುಪಡಿಸಿ ಇತರೇ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ರೂ. 10.00 ಲಕ್ಷಗಳ (ಹತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತವನ್ನು ಕುಟುಂಬಸ್ಥರಿಗೆ ನೀಡುವುದು.
*ದಿನಾಂಕ: 14/11/2023 ಮತ್ತು ನಂತರದಲ್ಲಿ ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಮಾತ್ರ ರೂ. 50.00 ಲಕ್ಷಗಳ (ಐವತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತಕ್ಕೆ ಅರ್ಹರಿರುತ್ತಾರೆ.
* ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ 200 ರೂಪಾಯಿ ಗಳಿಂದ 350 ರೂಪಾಯಿ ಗಳಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ಸದಸ್ಯ ನೌಕರರ ಪರವಾಗಿ ನೀಡಲಾಗುತ್ತಿರುವ 100 ರೂಪಾಯಿ ಗಳ ವಂತಿಕೆಯನ್ನು 150 ರೂಪಾಯಿ ಗಳಿಗೆ ಹೆಚ್ಚಿಸಿ ಪಾವತಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ನಿಗಮ ತಿಳಿಸಿದೆ.
ಇನ್ನು ವಾರ್ಷಿಕ ಸರಾಸರಿ 15ಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ನೌಕರರು ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಖಾಯಿಲೆಗಳಿಂದ ಪ್ರತಿ ವರ್ಷ 100 ನೌಕರರು ಮರಣ ಹೊಂದುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications