ನವೀಕರಣಗೊಂಡ ಟೌನ್‌ಹಾಲ್ ಏ.8ಕ್ಕೆ ಉದ್ಘಾಟನೆ
ಬೆಂಗಳೂರು, ಏ.7 : ಸುಮಾರು ಏಳು ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಂಡ ಬೆಂಗಳೂರಿನ ಟೌನ್‌ಹಾಲ್ ಉದ್ಘಾಟನೆ ಬುಧವಾರ ನಡೆಯಲಿದೆ. ಸೆಪ್ಟೆಂಬರ್‌ನಿಂದ ನವೀಕರಣ ಕಾಮಗಾರಿಗಾಗಿ ಟೌನ್‌ಹಾಲ್ ಅನ್ನು ಬಂದ್ ಮಾಡಲಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಟೌನ್‌ಹಾಲ್ ನವೀಕರಣ ಕಾಮಗಾರಿ ಕೈಗೊಂಡಿತ್ತು. ನಿಗದಿಯಂತೆ ಈ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಅನುದಾನ ಬಿಡುಗಡೆ ವಿಳಂಬವಾದ ಕಾರಣ ಕಾಮಗಾರಿ ಏಪ್ರಿಲ್‌ನಲ್ಲಿ ಪೂರ್ಣಗೊಂಡಿದೆ.

ಏ.8ರ ಬುಧವಾರ ನಮೀಕರಣಗೊಂಡ ಟೌನ್‌ಹಾಲ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬಿಬಿಎಂಪಿ ಮೇಯರ್ ಎನ್.ಶಾಂತಕುಮಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ಬೆಂಗಳೂರಿನ ಟೌನ್ ಹಾಲ್ ಬಂದ್]
800 ಜನರು ಕೂರಬಹುದು : ನವೀಕರಣಗೊಂಡ ಟೌನ್‌ಹಾಲ್‌ನಲ್ಲಿ 800 ಜನರು ಕೂರುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಮುರಿದು ಹೋದ ಖುರ್ಚಿಗಳನ್ನು ಬದಲಾವಣೆ ಮಾಡಿ ಸಂಪೂರ್ಣ ಕುಷನ್ ಅಳವಡಿಸಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆ, ಉತ್ತಮ ಧ್ವನಿ ವರ್ಧಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಬಾಡಿಗೆ ಹೆಚ್ಚಳ : ನವೀಕರಣಗೊಂಡ ಟೌನ್‌ಹಾಲ್‌ನ ದಿನದ ಬಾಡಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೊದಲು 10 ಸಾವಿರ ರೂ. ಬಾಡಿಗೆ ಪಡೆಯಲಾಗುತ್ತಿತ್ತು. ಈಗ ಹೊಸ ವ್ಯವಸ್ಥೆ ಅಳವಡಿಸಿರುವುದರಿಂದ ಬಾಡಿಗೆ ಹೆಚ್ಚಾಗಲಿದೆ. ಈ ಕುರಿತು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಾಗಿದೆ.
ಟೌನ್ ಹಾಲ್ ಕುರಿತು : ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಸಹ ಒಂದಾಗಿದೆ. ಬೆಂಗಳೂರು ನಗರಸಭೆ ಅಧ್ಯಕ್ಷರಾಗಿದ್ದ ಪುಟ್ಟಣ್ಣ ಚೆಟ್ಟಿ ಅವರ ಹೆಸರನ್ನು ಇದಕ್ಕೆ ಇಡಲಾಗಿದ್ದು (ಟೌನ್ ಹಾಲ್) ಎಂದು ಪ್ರಸಿದ್ಧಿಯಾಗಿದೆ.
1933ರ ಮಾರ್ಚ್ 6ರಂದು ಮೈಸೂರಿನ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಟೌನ್ ಹಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸೆಪ್ಟೆಂಬರ್ 11, 1935ರಂದು ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1976, 1990ರಲ್ಲಿ ಇದನ್ನು ನವೀಕರಣ ಮಾಡಲಾಗಿತ್ತು.











Click it and Unblock the Notifications