ಬೆಂಗಳೂರು ಮಳೆ, ಸಿಎಂಗೆ ಪತ್ರ ಬರೆದ ಪರಮೇಶ್ವರ್
ಬೆಂಗಳೂರು, ಸೆ. 26 : ಬೆಂಗಳೂರು ನಗರದಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಬಿಬಿಎಂಪಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಾಲಿಕೆ ಸದಸ್ಯರು, ಶಾಸಕರು ಸಂಕಷ್ಟಕ್ಕೆ ಸಿಲುಕಿರುವ ಜನರ ಸಮಸ್ಯೆ ಪರಿಹಾರ ಮಾಡಲು ಆದ್ಯತೆ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ಅಪಾರ ನಷ್ಟ ಸಂಭವಿಸಿದೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ತಕ್ಷಣ ಅನುದಾನ ಬಿಡುಗಡೆ ಮಾಡಿ ಪರಿಹಾರ ಕಾರ್ಯಗಳಿಗೆ ನೆರವಾಗಬೇಕು ಎಂದು ಪರಮೇಶ್ವರ್ ಶುಕ್ರವಾರ ಸಿಎಂಗೆ ಪತ್ರ ಬರೆದಿದ್ದಾರೆ. [ಬೆಂಗಳೂರಲ್ಲಿ ಬಂದಿತು ಭಾರೀ ಮಳೆ]

ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಬಿಬಿಎಂಪಿ, ಆಯುಕ್ತರು, ಸಹಾಯಕ ಇಂಜಿನಿಯರ್‌ಗಳಿಗೆ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಪರಮೇಶ್ವರ್ ಒತ್ತಾಯಿಸಿದ್ದಾರೆ. [ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ]
ಇನ್ನೂ ಎರಡು ದಿನ ಬೆಂಗಳೂರು ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಪಾಲಿಕೆ ನೌಕರರು ರಕ್ಷಣಾ ಕಾರ್ಯಕ್ಕೆ ಸಿದ್ಧರಾಗಿರಬೇಕು ಎಂದು ಪತ್ರದಲ್ಲಿ ಪರಮೇಶ್ವರ್ ಹೇಳಿದ್ದಾರೆ.
ಅಗತ್ಯ ಕ್ರಮಗಳನ್ನ ಕೈಗೊಂಡಿದ್ದೆವು : ಗುರುವಾರ ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದ ಪರಿಣಾಮ ಅವಾಂತರ ಸಂಭವಿಸಿದ್ದು, ಅಪಾರ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಳೆ ಬರುವ ಮುನ್ಸೂಚನೆ ಹಿನ್ನಲೆಯಲ್ಲಿ ಚರಂಡಿಗಳನ್ನು ಶುಚಿಗೊಳಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಮಳೆ ಬಂದಿದ್ದರಿಂದ ತೊಂದರೆ ಉಂಟಾಗಿದ್ದು, ಬಿಬಿಎಂಪಿ ರಕ್ಷಣಾ ಕಾರ್ಯ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications