ನರೇಂದ್ರ ಮೋದಿಗೆ ತಕ್ಕ ಉತ್ತರ ನೀಡಲು ಸಿದ್ಧ : ದೇವೇಗೌಡ
Recommended Video

ಬೆಂಗಳೂರು, ಏಪ್ರಿಲ್ 05 : 'ನರೇಂದ್ರ ಮೋದಿ ಅವರಿಗೆ ತಕ್ಕ ಉತ್ತರ ನೀಡಲು ನಾನು ಸಿದ್ಧ. ನಾವು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಜನರ ಏಳಿಗೆಗಾಗಿ ಒಂದಾಗಿದ್ದೇವೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಬೆಂಗಳೂರಿನ ಆರ್.ಟಿ.ನಗರದ ಎಚ್.ಎಂ.ಟಿ. ಗ್ರೌಂಡ್‌ನಲ್ಲಿ ಶುಕ್ರವಾರ ಕಾಂಗ್ರೆಸ್-ಜೆಡಿಎಸ್ ನಾಯಕರ ಶಕ್ತಿ ಪ್ರದರ್ಶನ ನಡೆಯಿತು. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರ ಪರವಾಗಿ ಜಂಟಿ ಪ್ರಚಾರ ಮಾಡಲಾಯಿತು.
ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕೃಷ್ಣ ಬೈರೇಗೌಡ ಅವರ ಪರವಾಗಿ ಮತಯಾಚನೆ ಮಾಡಿದರು. ಎಚ್.ಡಿ.ದೇವೇಗೌಡ ಅವರು ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕೃಷ್ಣ ಬೈರೇಗೌಡ ಕಣದಲ್ಲಿದ್ದಾರೆ. ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.

ಮೋದಿ ಪರ ಪ್ರಚಾರ
'ಮಾಧ್ಯಮಗಳು ಯಾವುದೇ ಭಾಷೆಯಲ್ಲಿರಲಿ. ಎಲ್ಲಾ ಭಾಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಒಂದೆರಡು ಮಾಧ್ಯಮಗಳನ್ನು ಹೊರತು ಪಡಿಸಿ ಮೋದಿಯ ವಿರುದ್ದ ನಿಲ್ಲುವ ಮಾಧ್ಯಮಗಳಿಲ್ಲ. ನಮ್ಮ ಮಾಧ್ಯಮ ಮಿತ್ರರು ತಪ್ಪು ತಿಳಿಯ ಬಾರದು' ಎಂದು ದೇವೇಗೌಡರು ಹೇಳಿದರು.
'ಎಲ್ಲ ಕಡೆ ಯುವಕರು ಮೋದಿ ಮೋದಿ ಅಂತಾರೆ. ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಪರ ಪ್ರಚಾರ ನೀಡುತ್ತಿದ್ದಾರೆ' ಎಂದು ದೇವೇಗೌಡರು ತಿಳಿಸಿದರು.

ಬೆಂಗಳೂರಿಗೆ ಮೋದಿ ಏನು ಮಾಡಿದ್ದಾರೆ
'ನರೇಂದ್ರ ಮೋದಿ ಅವರು ಬೆಂಗಳೂರಿಗೆ ಎಷ್ಟು ಬಾರಿ ಬಂದಿದ್ದಾರೆ. ಐಟಿ ಹಬ್‌ಗೆ ಶಕ್ತಿ ತುಂಬಿದ್ದು ಯಾರು?. ಆರ್ಥಿಕ ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಶಕ್ತಿ ತುಂಬಿದರು. ಐಟಿಗೆ 10 ವರ್ಷ ತೆರಿಗೆ ರಹಿತವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿ ಕೊಟ್ಟಿದ್ದೇವೆ. ಐಟಿ ಅಭಿವೃದ್ದಿಗೆ ನಾವು ಅನುಕೂಲಕರ ವಾತಾವರಣ ಮಾಡಿಕೊಟ್ಟಿದ್ದೇವೆ' ಎಂದು ಹೇಳಿದರು.

ಜಂಟಿ ಪ್ರಚಾರ ಮಾಡುತ್ತೇವೆ
'ನಾನು ಸಿದ್ದರಾಮಯ್ಯ ಅವರೊಂದಿಗೆ ಹೋಗಿ ಪ್ರಚಾರ ನಡೆಸುತ್ತೇನೆ. ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವೆ. ಮೋದಿಗೆ ಉತ್ತರ ಕೊಡಲು ಸಿದ್ದನಾಗಿದ್ದೇನೆ. ಅಧಿಕಾರಕ್ಕಾಗಿ ನಾವು ಮೈತ್ರಿ ಮಾಡಿಕೊಂಡಿಲ್ಲ. ಜನರ ಏಳಿಗೆಗಾಗಿ ಒಂದಾಗಿದ್ದೇವೆ' ಎಂದು ದೇವೇಗೌಡ ಹೇಳಿದರು.

ವಿದ್ಯಾವಂತ ಯುವಕನಿಗೆ ವೋಟ್ ಹಾಕಿ
'ಕೃಷ್ಣ ಬೈರೇಗೌಡ ಅವರು ವಿದ್ಯಾವಂತ ಯುವಕ. ನಾನೇ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೇನೆ. ಅವರಿಗೆ ಮತ ನೀಡಿ' ಎಂದು ದೇವೇಗೌಡರು ಜನರಲ್ಲಿ ಮನವಿ ಮಾಡಿದರು.
'ಸ್ಲಂ ನಿವಾಸಿಗಳಿಗೆ ಅಕ್ಕಿ ನೀಡುವ ಜನಪರ ಯೋಜನೆ ನೀಡಿದ್ದೇವೆ.ರಾಜ್ಯಾದ್ಯಂತ ಎಲ್ಲಾ ಬಡವರಿಗೂ ಪಡಿತರ ಚೀಟಿ ನೀಡಿದ್ದೇವೆ. ನಗರ ಪ್ರದೇಶದ ಸ್ಲಂ ನಿವಾಸಿಗಳಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ' ಎಂದು ದೇವೇಗೌಡರು ಹೇಳಿದರು.












Click it and Unblock the Notifications