Ramadan food Mela: ಸಿಲಿಕಾನ್ ಸಿಟಿಯ ಖ್ಯಾತ ಫ್ರೇಜರ್ ಟೌನ್ ಫುಡ್ ಫೆಸ್ಟಿವಲ್‌ಗೆ ಫುಲ್ ಸ್ಟಾಪ್!
ಮಂಡ್ಯ, ಮಾರ್ಚ್ 13: ಮುಸ್ಲಿಂ ಸಮುದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ರಂಜಾನ್ ಪ್ರಯುಕ್ತ ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿ ಖ್ಯಾತ ಆಹಾರ ಮೇಳ ನಡೆಯುತ್ತದೆ. ಪ್ರತಿ ವರ್ಷ ಈ ಆಹಾರ ಮೇಳಕ್ಕೆ ಲಕ್ಷಾಂತರ ಜನ ಭೇಟಿ ನೀಡಿ ವಿಧ ವಿಧದ ಭಕ್ಷ್ಯಗಳನ್ನು ಸವಿಯುತ್ತಾರೆ. ಆದರೆ, ಈ ಬಾರಿ ಆಹಾರ ಮೇಳ ನಡೆಯುವುದಿಲ್ಲ.
ಹೌದು, ಶಿವಾಜಿನಗರ ಬಳಿಯಿರುವ ಫ್ರೇಜರ್ ಟೌನ್‌ನಲ್ಲಿ ಈ ಬಾರಿ 'ವಾರ್ಷಿಕ ಆಹಾರ ಮೇಳ' ನಿಷೇಧಿಸುವಂತೆ ಬೆಂಗಳೂರಿನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರತಿಭಟನೆಯ ನಂತರ ಫ್ರೇಜರ್ ಟೌನ್‌ನ ವಾರ್ಷಿಕ ರಂಜಾನ್ ಆಹಾರ ಮೇಳ ಸ್ಥಗಿತಗೊಂಡಿದೆ.

ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘವು (ಎಫ್‌ಟಿಆರ್‌ಡಬ್ಲ್ಯೂಎ) ನಿರಂತರವಾಗಿ ಕಳವಳ ವ್ಯಕ್ತಪಡಿಸಿದ ನಂತರ ರಂಜಾನ್ ಹಬ್ಬದ ಜೊತೆಯಲ್ಲಿ ವಾರ್ಷಿಕ ಆಹಾರ ಮಳಿಗೆ ಮೇಳವನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್ 10 ರಿಂದ ಏಪ್ರಿಲ್ 9ರ ವರೆಗೆ ಒಂದು ತಿಂಗಳ ಕಾಲ ರಂಜಾನ್ ಆಚರಣೆ ನಡೆಯಲಿದ್ದು, ಈ ವೇಳೆ ಮಸೀದಿ ರಸ್ತೆ, ಎಂಎಂ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾರ್ಷಿಕ ಆಹಾರ ಮೇಳ ನಡೆಯುತ್ತದೆ.
ಈ ಆಹಾರ ಮೇಳದಲ್ಲಿ ಪ್ರತಿ ವರ್ಷ ಜನರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇದರಿಂದ ಸ್ಥಳೀಯರಿಗೆ ಕಿರಿಕಿರಿ, ಅತಿಯಾದ ತ್ಯಾಜ್ಯ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ಉಲ್ಲೇಖಿಸಿ ನಿವಾಸಿಗಳು ವಿರೋಧ ವ್ಯಕ್ತಿಪಡಿಸಿದ್ದರು. ಹೀಗಾಗಿ ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘವು (FTRWA) ಗಟ್ಟಿ ನಿಲುವು ತೆಗೆದುಕೊಂಡಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಈ ಸಮಸ್ಯೆಗಳನ್ನು ಪರಿಹರಿಸಲು ತಿಳಿಸಿತ್ತು.
ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘದ ಬೇಡಿಕೆಗಳನ್ನು ಬಿಬಿಎಂಪಿ ಅಂಗೀಕರಿಸಿತು, ರಂಜಾನ್ ಹಬ್ಬದ ಸಮಯದಲ್ಲಿ ತಾತ್ಕಾಲಿಕ ಆಹಾರ ಮಳಿಗೆಗಳನ್ನು ಸ್ಥಾಪಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಪುಲಿಕೇಶಿ ನಗರದಲ್ಲಿನ ಬಿಬಿಎಂಪಿ ಆರೋಗ್ಯ ಅಧಿಕಾರಿಯ ಅಧಿಕೃತ ಆದೇಶವು ನಿರ್ಬಂಧಗಳನ್ನು ವಿವರಿಸಿದೆ. ಫುಟ್‌ಪಾತ್‌ಗಳನ್ನು ಆಕ್ರಮಿಸುವ ಮತ್ತು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಮಾರಾಟ ಮಳಿಗೆಯನ್ನು ನಿಷೇಧಿಸಿದೆ.

ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ ಕಳವಳಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಗಳು, ರೆಸ್ಟೋರೆಂಟ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಬಿಬಿಎಂಪಿ, ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಮತ್ತು ಇತರ ಸಂಬಂಧಿತ ಇಲಾಖೆಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ಆದೇಶಿಸಿದ್ದಾರೆ.
ಅತಿಕ್ರಮಣ ತಡೆಗೆ ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಫುಟ್‌ಪಾತ್ ಮತ್ತು ರಸ್ತೆಗಳಲ್ಲಿನ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಿದೆ. ನಿಷೇಧದ ಹೊರತಾಗಿಯೂ, ಕೆಲವು ಮಾರಾಟಗಾರರು ರಂಜಾನ್ ಸಮಯದಲ್ಲಿ ಮಂಗಳವಾರದಂದು ಫುಟ್‌ಪಾತ್‌ಗಳನ್ನು ಅತಿಕ್ರಮಿಸಲು ಪ್ರಯತ್ನಿಸಿದ್ದರು. ಬಿಬಿಎಂಪಿ ಅಧಿಕಾರಿಗಳ ಕ್ರಮದಿಂದ ಕೂಡಲೇ ಅಕ್ರಮ ಮಳಿಗೆಗಳನ್ನು ತೆರವು ಮಾಡಿದೆ.
ಬೆಂಗಳೂರು ಮಿರರ್ ಜೊತೆಗೆ ಎಫ್‌ಟಿಆರ್‌ಡಬ್ಲ್ಯುಎ ಜಂಟಿ ಕಾರ್ಯದರ್ಶಿ ಎಂಡಿ ಫಾರೂಕ್ ಮಾತನಾಡಿ, "ಫ್ರೇಜರ್ ಟೌನ್‌ನಲ್ಲಿ ಮತ್ತೆ ಯಾವುದೇ 'ಆಹಾರ ಮೇಳ' ಇರುವುದಿಲ್ಲ, ಏಕೆಂದರೆ ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆ ಮತ್ತು ಅನಾನುಕೂಲತೆ ಉಂಟಾಗುತ್ತಿದೆ" ಎಂದು ಹೇಳಿದ್ದಾರೆ.
ಫ್ರೇಜರ್ ಟೌನ್‌ನಲ್ಲಿ ಫುಟ್‌ಪಾತ್‌ಗಳು ಮತ್ತು ರಸ್ತೆಗಳನ್ನು ಇನ್ನು ಮುಂದೆ ಅತಿಕ್ರಮಿಸಲು ಬಿಡುವುದಿಲ್ಲ. ಅಕ್ರಮ ಮಳಿಗೆಗಳಿಂದ ಉಂಟಾಗುವ ಅಡಚಣೆಯನ್ನು ಕೊನೆಗೊಳಿಸಲಾಗುವುದು. ಆಹಾರ ಮೇಳದಿಂದ ಉಂಟಾಗುವ ಅನಾನುಕೂಲತೆಗಳು ಮತ್ತು ಅಡಚಣೆಗಳಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications