Rameshwaram Cafe: ಸ್ಪೋಟಕ್ಕೆ ಬಲಿಯಾದ ರಾಮೇಶ್ವರಂ ಕೆಫೆ ಶಿವರಾತ್ರಿಯಂದು ಮತ್ತೆ ಓಪನ್
ಬೆಂಗಳೂರು, ಮಾರ್ಚ್ 03: ವೀಕೆಂಡ್ ಆರಂಭವಾಗುವ ಮುನ್ನವೇ ನಗದರಲ್ಲಿ ಹಾಡಹಗಲೇ ಆಗಿದ್ದ ಬಾಂಬ್ ಸ್ಫೋಟ ಎಲ್ಲರ ಚಿತ್ತವನ್ನು ಬೆಂಗಳೂರಿನತ್ತ ಎಳೆದಿದೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಆರೋಪಿಯ ಪತ್ತೆಗೆ ಹರಸಾಹಸ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಯ ಬಂಧನವಾಗಿಲ್ಲ.
ಇದರ ಬೆನ್ನಲ್ಲೇ ರಾಮೇಶ್ವರಂ ಕೆಫೆಯ ಸಂಸ್ಥಾಪಕ ಮತ್ತು ಸಿಇಒ ರಾಘವೇಂದ್ರ ರಾವ್ ಅವರು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದುರಂತ ಸಂಭವಿಸಿದ ಶುಕ್ರವಾರವೇ ಮತ್ತೆ ಕೆಫಿಎಯನ್ನು ಓಪನ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂದರೆ, ಕೆಫೆಯನ್ನು ಈ ವರ್ಷ ಮಾರ್ಚ್ 8ರ ಶಿವರಾತ್ರಿ ಹಬ್ಬದಂದೇ ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

ಶಿವರಾತ್ರಿ ಹಬ್ಬದಂದೇ ಮತ್ತೆ ರಾಮೇಶ್ವರಂ ಕೆಫೆ ಓಪನ್
"ಈ ಘಟನೆ ಶುಕ್ರವಾರ ಸಂಭವಿಸಿದೆ. ರಾಮೇಶ್ವರಂ ಕೆಫೆಯು ಮುಂದಿನ ಶುಕ್ರವಾರ ಶಿವರಾತ್ರಿಯಂದು ಮರುಹುಟ್ಟು ಪಡೆಯಲಿದೆ" ಎಂದು ರಾಘವೇಂದ್ರ ರಾವ್ ಹೇಳಿದ್ದಾರೆ. "ನಾವು ಈ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಬೆಂಬಲ ನೀಡಿದ ಅಧಿಕಾರಿಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇವೆ. ನಮ್ಮ ಉತ್ಸಾಹವನ್ನು ಯಾವುದೇ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ. ದುರದೃಷ್ಟಕರ ಘಟನೆ ನಡೆದ ಒಂದು ವಾರದೊಳಗೆ ನಮ್ಮ ಬ್ರೂಕ್‌ಫೀಲ್ಡ್ ಔಟ್‌ಲೆಟ್ ಅನ್ನು ಪುನಃ ತೆರೆಯಲು ನಾವು ನಿರ್ಧರಿಸಿದ್ದೇವೆ, ಅಂದರೆ ಮಾರ್ಚ್ 8 (ಶುಕ್ರವಾರ) ಮಹಾಶಿವರಾತ್ರಿಯ ಶುಭ ದಿನದಂದು ಮತ್ತೆ ಪುನರಾರಂಭಿಸುತ್ತೇವೆ" ಎಂದಿದ್ದಾರೆ.
ಕುಮಾರಪಾರ್ಕ್ ಬಳಿ 2012 ರಲ್ಲಿ ಸ್ಥಾಪನೆಯಾದಾಗಿನಿಂದ ಕೆಫೆಯ ದೀರ್ಘಕಾಲದ ಅಸ್ತಿತ್ವವನ್ನು ಒತ್ತಿ ಹೇಳಿರುವ ರಾಘವೇಂದ್ರ ರಾವ್, ಬಾಂಬ್ ದಾಳಿಯ ಹಿಂದೆ ಯಾವುದೇ ವ್ಯಾಪಾರ ಸಂಬಂಧಿತ ದ್ವೇಷ ಇರುವುದನ್ನು ನಿರಾಕರಿಸಿದ್ದಾರೆ. "ಹೋಟೆಲ್ ಉದ್ಯಮಿಗಳು ಈ ರೀತಿ ವರ್ತಿಸುವುದಿಲ್ಲ" ಎಂದು ದೃಢಪಡಿಸಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ವರದಿ ಮಾಡಲಾಗುತ್ತದೆ. ನವೆಂಬರ್‌ನಲ್ಲಿ ಬಸವೇಶ್ವರ ನಗರ ಶಾಖೆಯ ಶಾಖೆಯಲ್ಲಿ ಬ್ಯಾಗ್ ಪತ್ತೆಯಾಗಿದೆ. ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದೇವೆ ಎಂದೂ ತಿಳಿಸಿದ್ದಾರೆ.

ರಾಮೇಶ್ವರಂ ಕೆಫೆ ಬ್ರೂಕ್‌ಫೀಲ್ಡ್ ಔಟ್‌ಲೆಟ್ ಸುಮಾರು ಒಂದು ವರ್ಷ ಮತ್ತು ಮೂರು ತಿಂಗಳ ಹಳೆಯದಾಗಿದೆ. ರಾಮೇಶ್ವರಂ ಕೆಫೆ ಇಂದಿರಾನಗರ, ಜೆಪಿ ನಗರ ಮತ್ತು ರಾಜಾಜಿನಗರ ಸೇರಿದಂತೆ ಬೆಂಗಳೂರಿನ ಇತರ ಮೂರು ಸ್ಥಳಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸ್ಫೋಟದ ದಿನದಂದು, ಸಹ-ಸಂಸ್ಥಾಪಕಿ ದಿವ್ಯಾ ರಾವ್ ಪ್ರಕಾರ, ಬ್ರೂಕ್‌ಫೀಲ್ಡ್ ಔಟ್ಲೆಟ್ 150 ಉದ್ಯೋಗಿಗಳನ್ನು ಹೊಂದಿದೆ.
ಕಳೆದ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಜನನಿಬಿಡ ರಾಮೇಶ್ವರಂ ಕೆಫೆ ರೆಸ್ಟೋರೆಂಟ್‌ನಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗವು ಶನಿವಾರ ನಾಲ್ವರನ್ನು ಬಂಧಿಸಿದೆ. ಇನ್ನೇನು ಪ್ರಮುಖ ಆರೋಪಿಯ ಗುರುತು ಪತ್ತೆ ಮಾಡಲು ಸುಳಿವು ಸಿಕ್ಕಿದ್ದು, ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications