ಸಿಡಿ ಗರ್ಲ್ ಹೇಳಿಕೆ ಎಸ್ಐಟಿಗೆ ಈಗ ಮಹತ್ವವಾಗಿಲ್ಲ ಯಾಕೆ?
ಬೆಂಗಳೂರು, ಮಾರ್ಚ್ 15: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟದ ರೂವಾರಿ ಯುವತಿ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುತ್ತಾಳಾ ? ಆಕೆ ಹೇಳಿದ ಜಾಗಕ್ಕೆ ಬಂದು ಹೇಳಿಕೆ ದಾಖಲಿಸಿಕೊಳ್ಳುವ ಪೊಲೀಸರ ಮನವಿಯನ್ನು ಸ್ವೀಕರಿಸಿ ರಹಸ್ಯವಾಗಿ ಹೇಳಿಕೆ ದಾಖಲಿಸುತ್ತಾಳಾ ? ಇಲ್ಲವೇ ಪ್ರಕರಣದ ಬೆಳವಣಿಗೆ ನೋಡಿಕೊಂಡು ಅಖಾಡಕ್ಕೆ ಇಳಿಯುತ್ತಾಳಾ ? ಸಂತ್ರಸ್ತೆ ಎನ್ನಲಾದ ಯುವತಿಯ ನಡೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ದಿನೇಶ್ ಕಲ್ಲಹಳ್ಳಿ ನೀಡಿರುವ ದೂರಿನ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಯುವತಿ ಮನೆಗೆ ನೋಟಿಸ್ ಅಂಟಿಸಿದ್ದಾರೆ. ಅಲ್ಲದೇ ಇ ಮೇಲ್ ಮೂಲಕ ನೋಟಿಸ್ ನೀಡಿದ್ದಾರೆ. ನೋಟಿಸ್ ಪ್ರಕಾರ ಇವತ್ತು ಯುವತಿ ಹೇಳಿಕೆ ದಾಖಲಿಸಬೇಕು !
ಪ್ರಕರಣವನ್ನು ವಿಶೇಷ ತನಿಖಾ ತಂಡ ಕೈಗೆತ್ತಿಕೊಳ್ಳುತ್ತಿದ್ದಂತೆ ಐವರನ್ನು ವಿಚಾರಣೆಗೆ ಒಳಪಡಿಸಿತ್ತು. ಅದರಲ್ಲಿ ಪ್ರಮುಖವಾಗಿ ಚಿಕ್ಕಮಗಳೂರು ಮೂಲದ ಪತ್ರಕರ್ತನ ಧ್ವನಿ ಮಾದರಿ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ. ಧ್ವನಿ ಮಾದರಿಯಲ್ಲಿ ಸಾಮ್ಯತೆ ಕಂಡು ಬಂದರೆ, ಪತ್ರಕರ್ತನನ್ನು ವಿಚಾರಣೆಗೆ ಒಳಪಡಿಸಿ ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನೆರಡು ದಿನದಲ್ಲಿ ಧ್ವನಿ ಪರೀಕ್ಷೆ ವರದಿ ಬರಲಿದೆ. ಇನ್ನು ಸಿಡಿಯಲ್ಲಿರುವ ಧ್ವನಿಗೂ ಹಾಗೂ ಚಿಕ್ಕಮಗಳೂರು ಮೂಲದ ಪತ್ರಕರ್ತನ ಧ್ವನಿಗೂ ಸಾಮ್ಯತೆ ಇರುವುದು ಕಂಡು ಬಂದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿಯೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಕುತೂಹಲಕಾರಿ ಬೆಳವಣಿಗೆ:
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟಗೊಂಡ ದಿನವೇ ಅದರಲ್ಲಿ ಕಾಣಿಸಿಕೊಂಡಿದ್ದ ಯುವತಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಪ್ರಕರಣ ಎಸ್ಐಟಿ ತನಿಖೆಗೆ ವಹಿಸಿ ಜಾರಕಿಹೊಳಿ ದೂರು ದಾಖಲಿಸುತ್ತಿದ್ದಂತೆ ವಿಡಿಯೋ ಮೂಲಕ ಯುವತಿ ಕಾಣಿಸಿಕೊಂಡಿದ್ದಳು. ನನಗೆ ಜಾರಕಿಹೊಳಿಯಿಂದ ಅನ್ಯಾಯವಾಗಿದೆ. ಕೆಲಸ ಕೊಡಿಸುತ್ತೇನೆ ಎಂದು ನನ್ನನ್ನು ದುರ್ಬಳಕೆ ಮಾಡಿಕೊಂಡರು. ನನಗೆ ಮೋಸ ಆಗಿದೆ. ನನಗೆ ಜೀವ ಭಯ ಕಾಡುತ್ತಿದೆ. ಗೃಹ ಸಚಿವರೇ ನನಗೆ ರಕ್ಷಣೆ ಕೊಡಿ ಎಂದು ಕೇಳಿಕೊಂಡ ವಿಡಿಯೋ ತುಣುಕು ಜಾಲ ತಾಣದಲ್ಲಿ ಬಿಡುಗಡೆ ಮಾಡಿದ್ದಳು. ಯುವತಿಯ ಹೇಳಿಕೆ ಬಾರೀ ಸಂಚನಲ ಮೂಡಿಸಿತ್ತು. ಪೊಲೀಸರೇ ರಕ್ಷಣೆ ಒದಗಿಸುತ್ತೇವೆ ಎಂಬ ಆಶ್ವಾಸನೆ ನೀಡಿದರೂ ಯುವತಿ ಈವರೆಗೂ ಅಧಿಕೃತವಾಗಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಯುವತಿ ಹೇಳಿಕೆ ಬಹು ಮಹತ್ವ ಪಡೆದುಕೊಳ್ಳಲಿದೆ.

ಯುವತಿ ಹೇಳಿಕೆ ಮಹತ್ವ
ಸಂತ್ರಸ್ತೆ ಎನ್ನಲಾದ ಯುವತಿಯ ಹೇಳಿಕೆ ಆಧರಿಸಿ ರಾಜ್ಯ ಮಹಿಳಾ ಆಯೋಗ ಈಗಾಗಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಯುವತಿ ಆಯೋಗದ ಮುಂದೆ ಹೇಳಿಕೆ ದಾಖಲಿಸಿದ ಕೂಡಲೇ ಆಕೆಗೆ ಭದ್ರತೆ ನೀಡುವ ಬಗ್ಗೆ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಬಹುದು. ಯುವತಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ, ನ್ಯಾಯ ಕೊಡಿಸುವ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇಲ್ಲವೇ ಆ ಯುವತಿ ವಾಸಸ್ಥಳ ವ್ಯಾಪ್ತಿಯ ಪೊಲೀಸ್ ಠಾಣೆಗೆ ಶಿಫಾರಸು ಮಾಡಬಹುದು. ಆಯೋಗದ ಶಿಫಾರಸು ನಿರಾಕರಿಸಿದರೆ ಸಂತ್ರಸ್ತೆ ಎನ್ನಲಾದ ಯುವತಿ ಆಯೋಗದ ಶಿಫಾರಸು ವರದಿ ಆಧರಿಸಿ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.

ಪರಿಸ್ಥಿತಿ ಕೈ ಮೀರಿದ ವೇಳೆ ಯುವತಿ ಅಖಾಡಕ್ಕೆ
ಜಾರಕಿಹೊಳಿ ಸಿಡಿ ಪ್ರಕರಣ ಇದೀಗ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಮಹಾ ನಾಯಕ ಕೈವಾಡವಿದೆ ಎಂದು ಜಾರಕಿಹೊಳಿ ಕುಟುಂಬ ಆರೋಪಿಸುತ್ತಿದೆ. ಇದರ ನಡುವೆ ನನ್ನನ್ನು ಸಿಲುಕಿಸುವ ಷಡ್ಯಂತ್ರ ಮೊದಲಿನಿಂದಲೂ ಮಾಡುತ್ತಿದ್ದಾರೆ. ಈ ಡಿಕೆಶಿ ಯಾರಿಗೂ ಹೆದರುವ ಜಾಯಮಾನದವನಲ್ಲ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಇದರ ನಡುವೆ ಪ್ರಕರಣದ ತನಿಖೆಗೆಂದು ರಚಿಸಿರುವ ವಿಶೇಷ ತನಿಖಾ ತಂಡ ಈಗಷ್ಟೇ ತನಿಖೆ ಆರಂಭಿಸಿದೆ. ಆರೋಪಗಳು ಏನೇ ಆಗಿದ್ದರೂ, ಸಾಕ್ಷಾಧಾರಗಳು ಮಹತ್ವ ಪಡೆದುಕೊಳ್ಳುತ್ತವೆ. ನನಗೆ ಯಾವ ರಾಜಕಾರಣಿಯ ಪರಿಚಯವೂ ಇಲ್ಲ, ಬೆಂಬಲವೂ ಇಲ್ಲ ಎಂದು ಹೇಳಿರುವ ಯುವತಿ ಪರಿಸ್ಥಿತಿ ಕೈ ಮೀರುವ ಹಂತದಲ್ಲಿ ಅಖಾಡಕ್ಕೆ ಇಳಿಯುವ ಸಾಧ್ಯತೆಯಿದೆ.
Recommended Video

ಎಸ್ಐಟಿಗೆ ಯುವತಿ ಮುಖ್ಯವಲ್ಲ ?
ಪ್ರಕರಣವನ್ನು ನಾನಾ ಅಯಾಮದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ತನಿಖಾ ಹಾದಿ ನೋಡಿದರೆ ಯುವತಿಯ ಹೇಳಿಕೆ ಮುಖ್ಯ ಎಂದು ಭಾವಿಸಿಲ್ಲ. ಸಿಡಿ ಮಾಡಿದವರು, ರಹಸ್ಯ ಕ್ಯಾಮರಾ ನಿರ್ವಹಣೆ ಮಾಡಿದವರು, ಸಿಡಿಯಾದ ಬಳಿಕ ಯಾರು ಯಾರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಲು ಎಸ್ಐಟಿ ಮುಂದಾಗಿದೆ. ಇದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ. ಹೀಗಾಗಿ ಸಿಡಿ ಬಿಡುಗಡೆಯಲ್ಲಿ ಈವರೆಗೂ ಐವರನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿದೆ. ಯುವತಿ ಹೊರತು ಪಡಿಸಿ ಇತರೆ ಶಂಕಿತರನ್ನು ವಿಚಾರಣೆ ನಡೆಸಿ ಅದರ ಆಧಾರದ ಮೇಲೆ ಸಾಕ್ಷಿಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಅಶ್ಲೀಲ ಸಿಡಿ ಸತ್ಯಾಂಶ ಬಯಲಿಗೆ ಎಳೆದು ಪೂರಕ ಸಾಕ್ಷಿಗಳನ್ನು ಸಂಗ್ರಹಿಸಿದ ಬಳಿಕ ಅದರ ಆಧಾರದ ಮೇಲೆ ಯುವತಿಯನ್ನು ಪ್ರಶ್ನಿಸಲು ಎಸ್ಐಟಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications