ಐದನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಿಡಿಲೇಡಿ ಹೇಳಿದ್ದೇನು ?
ಬೆಂಗಳೂರು, ಮಾರ್ಚ್ 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಶನಿವಾರ ಮಹತ್ವದ ತಿರುವು ಪಡೆದುಕೊಂಡಿದೆ. ತನ್ನ ಮಗಳು ಅಪಾಯದಲ್ಲಿದ್ದಾಳೆ ಎಂದು ಸಿಡಿ ಲೇಡಿಯ ಪೋಷಕರು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದರು. ಬಳಿಕ ತನ್ನ ಮಗಳನ್ನು ಬಳಸಿಕೊಂಡು ಡಿ.ಕೆ. ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದರ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಾಯಕ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸಿ "ಗಂಡಸು ಅಲ್ಲ, ಹೆಣ್ಣಿಗ ರಾಜಕಾರಣಿ" ನಿನ್ನನ್ನು ರಾಜಕೀಯವಾಗಿ ನಿನ್ನ ಕ್ಷೇತ್ರದಲ್ಲಿಯೇ ಮುಗಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿದ ಸಿಡಿ ಲೇಡಿ ಶನಿವಾರ ಸಂಜೆ ವೇಳೆಗೆ ಐದನೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾಳೆ.
ಎಲ್ಲರಿಗೂ ನಮಸ್ಕಾರ, ಇವತ್ತು ಆಗಿರುವ ಬೆಳವಣಿಗೆ ನೋಡಿದರೆ ನನಗೆ ಎಲ್ಲೋ ಭಯ ಆಗುತ್ತಿದೆ. ನಮ್ಮ ಅಪ್ಪನಿಗೆ ಏನೂ ಗೊತ್ತಿಲ್ಲ. ಅಂತಹವರನ್ನು ಇವರು ಪ್ರಭಾವ ಬೀರಿ ಬ್ಲಾಕ್ ಮೇಲ್ ಮಾಡಿ ಅವರ ಬಾಯಲ್ಲಿ ಏನೇನೋ ಹೇಳಿಸುತ್ತಿದ್ದಾರೆ. ಈ ಕೇಸ್‌ನಲ್ಲಿ ಅನ್ಯಾಯ ಆಗಿರುವುದು ನನಗೆ. ನನಗೆ ಅನ್ಯಾಯ ಮಾಡಿರುವುದು ಅವರು. ಅವರನ್ನು ಕರೆದು ವಿಚಾರಣೆ ನಡೆಸಬೇಕಿತ್ತು. ನ್ಯಾಯ ಸಿಗಬೇಕಿರುವುದು ನನಗೆ. ನನ್ನ ಬಗ್ಗೆ ಮಾತನಾಡಬೇಕಿತ್ತು. ನಾನು ಈಗ ಅಲ್ಲಿಗೆ ಬಂದು ಹೇಳಿಕೆ ನೀಡಲು ಭಯ ಆಗುತ್ತಿದೆ. ಇಷ್ಟು ಪ್ರಭಾವ ಬೀರಿ ನನ್ನ ಅಪ್ಪ ಅಮ್ಮನ ಮೇಲೆ ಪ್ರಭಾವ ಬೀರಿ ಕೇಸೇ ಬದಲಿಸುತ್ತಿದ್ದಾರೆ. ಅದಕ್ಕೆ ನಾನು ಸಿಎಂ ಯಡಿಯೂರಪ್ಪ ಅವರಿಗೆ, ಗೃಹ ಸಚಿವ ಬೊಮ್ಮಾಯಿ ಅವರಿಗೆ, ಡಿ.ಕೆ. ಶಿವಕುಮಾರ್ ಅವರಿಗೆ, ರಮೇಶ್ ಕುಮಾರ್ ಅವರಿಗೆ ಕೇಳಿ ಕೊಳ್ಳುತ್ತೇನೆ. ನನಗೆ ಮುಂದೆ ಬಂದು ಹೆಲ್ಪ್ ಮಾಡಿ. ನನಗೆ ಆಗಿರುವ ಅನ್ಯಾಯದ ಬಗ್ಗೆ ಎಲ್ಲರ ಮುಂದೆ ಬಿಚ್ಚಿಡುತ್ತೇನೆ. ನಾನು ಬಂದು ನ್ಯಾಯಾಧೀಶರ ಮುಂದೆ ಸ್ಟೇಟ್ ಮೆಂಟ್ ಹೇಳಿಕೆ ಕೊಡಬೇಕಾದರೆ, ನನಗೆ ಎಲ್ಲರೂ ಮುಂದೆ ಬಂದು ಸಹಾಯ ಮಾಡಬೇಕು. ನನಗೆ ಹೆಲ್ಫ್ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಒಂದೂವರೆ ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾಳೆ.

ಸಿಡಿ ಪ್ರಕರಣದ ಪ್ರತಿ ಬೆಳವಣಿಗೆ ಗಮಿಸಿರುವ ಸಿಡಿ ಲೇಡಿಯು ಐದನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಇನ್ನು ಆಕೆಯ ವಿಡಿಯೋ ಮೂಲ ಆಧರಿಸಿ ಆಕೆಯನ್ನು ಪತ್ತೆ ಮಾಡಲು ಎಸ್ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.












Click it and Unblock the Notifications