ರಾಮನಗರ ವಿವಾದ: ಒಕ್ಕಲಿಗರ ನಾಡಿನಲ್ಲಿ ಜೆಡಿಎಸ್ ಮುಗಿಸಲು ಹೊಸ ಅಸ್ತ್ರ ಹಿಡಿದು ಅಖಾಡಕ್ಕಿಳಿದ ಡಿಕೆಶಿ
ಬೆಂಗಳೂರು, ಅಕ್ಟೋಬರ್ 26: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇದು ಒಕ್ಕಲಿಗ ಪ್ರಾಬಲ್ಯದ ಪ್ರದೇಶದಲ್ಲಿ ದೊಡ್ಡ ಮಟ್ಟದ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ವಿಶೇಷವಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಭಾರೀ ಆಘಾತವನ್ನು ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಡಿಕೆ ಶಿವಕುಮಾರ್ ವಾದವೇನು?
ರಾಮನಗರ ಜಿಲ್ಲೆ ಮರುನಾಮಕರಣದ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, 'ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ' ಎಂದು ತಿಳಿಸಿದ್ದಾರೆ.

'ಈ ಹಿಂದೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು' ಎಂದು ಹೇಳಿದ್ದಾರೆ.
ತದನಂತರ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ನಂತರ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಒಳಗೊಂಡಂತೆ ಬೆಂಗಳೂರು ಗ್ರಾಮಂತರ ಜಿಲ್ಲೆಯನ್ನಾಗಿ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರನ್ನು ಹಾಗೇ ಉಳಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಯಿತು. ರಾಮನಗರ ಜಿಲ್ಲಾ ಕೇಂದ್ರವಾಯಿತು. ನಂತರ ಈ ಜಿಲ್ಲೆಗೆ ಹಾರೋಹಳ್ಳಿ ಹೊಸ ತಾಲ್ಲೂಕು ಸೇರ್ಪಡೆಯಾಯಿತು.
ಈಗ ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನನ್ನ ಚಿಂತನೆಯೂ ಕೂಡ ಎಂದು ಶಿವಕುಮಾರ್ ಹೇಳಿದ್ದಾರೆ.
'ಹೀಗಾಗಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಜೆಡಿಎಸ್ ಮುಗಿಸಲು ಹೊಸ ಅಸ್ತ್ರ
ಡಿಕೆಶಿ ಅವರ ಈ ವಾದವು ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ವಿಶೇಷವಾಗಿ ಒಕ್ಕಲಿಗ ಪ್ರಾಬಲ್ಯದ ಪ್ರದೇಶವಾಗಿರುವ ರಾಮನಗರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದೆ. ದೇವೇಗೌಡರು ರಾಮನಗರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರ ಅವರ ಪುತ್ರ ಕುಮಾರಸ್ವಾಮಿ ಅವರು ರಾಮನಗರದಿಂದ ಶಾಸಕರಾಗಿ ನಂತರ ಮುಖ್ಯಮಂತ್ರಿಯಾಗಿದ್ದರು. ಎಚ್ಡಿಕೆ ಸಿಎಂ ಆಗಿದ್ದಾಗಲೇ ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿದ್ದರು.
ಕುಮಾರಸ್ವಾಮಿ ಬಳಿಕ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಶಾಸಕರಾಗಿದ್ದರು. ರಾಮನಗರ ಜಿಲ್ಲೆಯಲ್ಲೇ ಬರುವ ಚನ್ನಪಟ್ಟಣದಿಂದ ಎಚ್‌ಡಿಕೆ ಈಗ ಶಾಸಕರಾಗಿದ್ದಾರೆ. ಈ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಮಾಗಡಿ, ಚನ್ನಪಟ್ಟಣ, ರಾಮನಗರ ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದೆ.
ಒಂದು ವೇಳೆ, ರಾಮನಗರ ಜಿಲ್ಲೆಯನ್ನು ಮರುನಾಮಕರಣ ಮಾಡಿ ಬೆಂಗಳೂರಿಗೆ ಸೇರಿಸಿದರೆ, ಜೆಡಿಎಸ್‌ಗೆ ಪೆಟ್ಟು ಬೀಳುವುದು ನಿಶ್ಚಿತವಾಗಿದೆ. ಇದು ಡಿಕೆ ಶಿವಕುಮಾರ್ ಅವರ ರಾಜಕೀಯ ತಂತ್ರವೂ ಆಗಿರಬಹುದು ಎನ್ನಲಾಗುತ್ತಿದೆ. ಒಕ್ಕಲಿಗ ಪ್ರಾಬಲ್ಯದ ಪ್ರದೇಶದಲ್ಲಿ ಜೆಡಿಎಸ್ ಅನ್ನು ಮುಗಿಸುವ ಹೊಸದೊಂದು ಅಸ್ತ್ರವನ್ನು ಹಿಡಿದು ಡಿಕೆಶಿ ಅಖಾಡಕ್ಕೆ ಇಳಿದಿರುಬಹುದು ಎಂಬ ಶಂಕೆಗಳೂ ವ್ಯಕ್ತವಾಗಿದೆ.
ಡಿಕೆಶಿ ಚಿಂತನೆಯ ಹಿಂದೆ ರಿಯಲ್ ಎಸ್ಟೇಟ್ ಲಾಬಿ?
ಡಿಕೆಶಿ ಮುಂದಿಟ್ಟಿರುವ ವಾದವು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಕನಕಪುರದ ಸುತ್ತಮುತ್ತಲಿನ ಅಕ್ರಮಗಳನ್ನು ಮುಚ್ಚಿಹಾಕಿಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ಶ್ರೀಮಂತ ಕುಳಗಳಿಗೆ ಜಮೀನು ಮಾರಿಸುವುದು ಡಿಕೆಶಿ ತಂತ್ರವಾಗಿದೆ ಎಂದಿದ್ದಾರೆ. ಇದೇ ವೇಳೆ, ಡಿಕೆಶಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕ ಆರ್ ಅಶೋಕ್ ಅವರು ರಿಯಲ್ ಎಸ್ಟೇಟ್ ಲಾಬಿ ಕುರಿತು ಮಾತನಾಡಿದ್ದಾರೆ.
ಜನರಲ್ಲಿ ಹೊಸ ಆಸೆ ಹುಟ್ಟುಹಾಕುವ ತಂತ್ರ
ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ, 'ಕನಕಪುರ, ರಾಮನಗರ, ಮಾಗಡಿ, ಚನ್ನಪಟ್ಟಣದ ಜನರು ತಮ್ಮ ಜಮೀನುಗಳನ್ನು ಮಾರಿಕೊಳ್ಳಬಾರದು. ಈ ಪ್ರದೇಶಗಳು ಮುಂದಿನ ದಿನಗಳಲ್ಲಿ ಬೆಂಗಳೂರು ವ್ಯಾಪ್ತಿಗೆ ಬರಲಿವೆ. ಆಗ ಜಮೀನುಗಳ ಬೆಲೆಯು ಆಕಾಶದೆತ್ತರಕ್ಕೆ ಹೋಗುತ್ತದೆ' ಎಂದು ತಿಳಿಸಿದ್ದಾರೆ.
ಜನರಲ್ಲಿ ಹೊಸದೊಂದು ಆಸೆಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಲಾಭ ಪಡೆಯುವುದು ಡಿಕೆಶಿ ವಾದದ ಹಿಂದಿನ ಕಾರ್ಯಸೂಚಿಯಾಗಿರಬಹುದು ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಡಿಕೆಶಿ ನೀಡಿರುವ ಪೆಟ್ಟು ಜೆಡಿಎಸ್ ಅನ್ನು ಆಳವಾಗಿ ಗಾಯಗೊಳಿಸಿರುವುದಂತೂ ನಿಶ್ಚಿತವಾಗಿದೆ.












Click it and Unblock the Notifications