ಸಿಸಿಬಿಗೆ ಹೊಸ ಸಮವಸ್ತ್ರ: ಪೊಲೀಸರ ಬ್ರಿಟೀಷ್ ಕಾಲದ 'ಟೋಪಿ'ಗೆ ಮುಕ್ತಿ ಯಾವಾಗ?
ಬೆಂಗಳೂರು, ಏ. 11: ಪೊಲೀಸ್ ಇಲಾಖೆಯ ಪೇದೆಗಳು ಧರಿಸುವ ಬ್ರಿಟೀಷ್ ಕಾಲದ ಟೋಪಿ ನೋಡಿದ್ರೆ ಪಿಕ್ ಪಾಕೆಟ್ ಮಾಡುವರು ನಗ್ತಾರೆ! ಯಾರಾದ್ರೂ ಅಪರಾಧಿಗಳನ್ನು ಬೆನ್ನಟ್ಟಿ ಹಿಡಿಯುವ ಸಂದರ್ಭದಲ್ಲಿ ಪೊಲೀಸರು ತಲೆ ಮೇಲಿನ ಟೋಪಿ ಎಲ್ಲಿ ಬೀಳುತ್ತೋ ಅಂತ ಅದನ್ನು ಒಂದು ಕೈಯಲ್ಲಿ ಹಿಡಿದುಕೊಂಡೇ ಚೇಸ್ ಮಾಡಬೇಕು. ಪೊಲೀಸ್ ಪೇದೆಗಳ ಟೋಪಿ ಬದಲಿಸುವ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಸಿಸಿಬಿ ಘಟಕದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಸಿಬ್ಬಂದಿಗೆ ವಿದೇಶಿ ಪೊಲೀಸ್ ಮಾದರಿಯಲ್ಲಿ ಟೋಪಿ ಮತ್ತು ಜಾಕೆಟ್ ನೀಡಲಾಗಿದೆ.
ಸಿಸಿಬಿಯಲ್ಲಿ ವರ್ಷಗಳಿಂದ ತಳವೂರಿದ್ದ ಪೊಲೀಸ್ ಸಿಬ್ಬಂದಿಗೆ ಒಂದೇ ಸಲ ಗೇಟ್ ಪಾಸ್ ಕೊಟ್ಟಿದ್ದ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತಾ, ಇದೀಗ ಸಿಸಿಬಿಗೆ ಹೊಸತನ ತುಂಬುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಿಸಿಬಿ ಪೊಲೀಸರಿಗೆ ಸುರಕ್ಷಿತ ಟೋಪಿ ಮತ್ತು ಜಾಕೆಟ್ ಗಳನ್ನು ನೀಡಿದ್ದಾರೆ. ವಿಶೇಷ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿ ಜೀವ ರಕ್ಷಣೆ ಜತೆಗೆ ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ಹೊಸ ಸಮವಸ್ತ್ರ ಅನುಕೂಲವಾಗಲಿದೆ.
ಕಪ್ಪು ಬಣ್ಣದ ಜಾಕೆಟ್‌ಗಳ ಜತೆಗೆ ಕ್ರಿಕೆಟರ್ಸ್ ಧರಿಸುವ ಟೋಪಿ ನೀಡಲಾಗಿದೆ. ಈ ಟೋಪಿಗಳಿಂದ ಬಿಸಿಲಿನಿಂದ ರಕ್ಷಣೆ ಪಡೆಯುವ ಜತೆಗೆ ಕಳ್ಳರ ಜೇಸ್ ಮಾಡುವಾಗ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಚೇಸ್ ಮಾಡುವ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಯಾವುದೇ ಆತಂಕವಿಲ್ಲದೇ ಕೆಲಸ ಮಾಡಬಹುದು.

ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸಿಸಿಬಿ ಸಿಬ್ಬಂದಿಯ ಹೊಸ ಸಮವಸ್ತ್ರ ಅನಾವರಣಗೊಳಿಸಿದರು. ಈ ವೇಳೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಪೊಲೀಸ್ ಪೇದೆಗಳ ಟೋಪಿ ಬದಲಾಗುವುದೇ?:
ಪ್ರತಿಭಟನೆ, ರ್ಯಾಲಿ ಮತ್ತಿತರ ಲಾಟಿ ಚಾರ್ಜ್ ವೇಳೆ ಈಗಲೂ ನಮ್ಮ ಪೊಲೀಸರು ಬಳಸತ್ತಿರುವ ಅನಾದಿ ಕಾಲದ ಟೋಪಿಗಳಿಂದ ಸಮಸ್ಯೆ ಜಾಸ್ತಿ. ತಲೆ ಮೇಲೆ ನಿಲ್ಲಲ್ಲ. ಸ್ವಲ್ಪ ಜೋರಾಗಿ ಓಡಿದ್ರೂ ಕೆಳಗೆ ಬಿದ್ದು ಹೋಗುತ್ತದೆ. ಪೊಲೀಸ್ ಕಾನ್‌ಸ್ಟೇಬಲ್ ಓಡುವಾಗ ಟೋಪಿ ಬಿದ್ದರೆ ಸಾರ್ವಜನಿಕವಾಗಿ ಅವಮಾನ ಅನುಭವಿಸುವುದಲ್ಲದೇ, ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ತಲೆ ಮೇಲೆ ಗಟ್ಟಿಯಾಗಿ ನಿಲ್ಲುವಂತಹ ಎಲಾಸ್ಟಿಕ್ ಟೋಪಿಗಳನ್ನು ನೀಡುವಂತೆ ಅನೇಕ ವರ್ಷಗಳಿಂದ ಪೊಲೀಸರು ಇಡುತ್ತಿದ್ದರೂ ಈವರೆಗೂ ಈಡೇರಿಲ್ಲ. ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಷ್ಟೇ ಎಲಾಸ್ಟಿಕ್ ಇರುವಂತಹ ವೃತ್ತಾಕಾರದ ಟೋಪಿಗಳನ್ನು ಧರಿಸುತ್ತಾರೆ.

ಆ ಟೋಪಿಗಳನ್ನು ಪೊಲೀಸ್ ಕಾನ್‌ಸ್ಟೇಬಲ್‌ಗಳು ಧರಿಸಿದ್ರೆ ಐಪಿಎಸ್ ಅಧಿಕಾರಿಗಳ ಸ್ಟೇಟಸ್ ಕಡಿಮೆ ಎಂಬ ಭಾವನೆಯೋ ಏನೋ ಗೊತ್ತಿಲ್ಲ. ಈವರೆಗೂ ಪೊಲೀಸ್ ಸಿಬ್ಬಂದಿಯ ಟೋಪಿ ಬದಲಾವಣೆ ಮಾಡಲು ಇಲಾಖೆ ಮುಂದಾಗಿಲ್ಲ. ಎಲೆಸ್ಟಿಕ್ ಮಾದರಿ ರೌಂಡ್ ಟೋಪಿ ಪೊಲೀಸ್ ಸಿಬ್ಬಂದಿಗೆ ನೀಡಿದ್ರೆ, ಲಾಟಿಚಾರ್ಜ್, ಕಳ್ಳರನ್ನು ಬೆನ್ನಟ್ಟುವ ವೇಳೆ ಸುಲಭವಾಗಿ ಕೆಲಸ ಮಾಡಬಹುದು. ಈ ವಾಸ್ತವ ಅರಿತು ರಾಜ್ಯದ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಗಳ ಟೋಪಿಯನ್ನು ಬದಲಿಸುತ್ತಾರಾ ಕಾದು ನೋಡಬೇಕು.












Click it and Unblock the Notifications