ರಾಘವೇಶ್ವರ ಭಾರತಿಗಳು ದೇಹ ತ್ಯಾಗಕ್ಕೂ ಸಿದ್ಧ : ಶ್ರೀಮಠ
ಬೆಂಗಳೂರು, ಅ.25: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಅವರು ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕ ವೇದಿಕೆಯ ಹವ್ಯಕರು ನಡೆಸಿದ ಸುದ್ದಿಗೋಷ್ಠಿಗೆ ಶ್ರೀಮಠದ ವಕ್ತಾರರು ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಶ್ರೀಗಳ ವಿರುದ್ಧ ಆರೋಪವೇನಾದರೂ ಸಾಬೀತಾದರೆ ಅವರು ಪೀಠ ತ್ಯಾಗವಷ್ಟೇ ಏಕೆ ದೇಹತ್ಯಾಗವನ್ನೇ ಮಾಡುತ್ತಾರೆ ಎಂದು ಘೋಷಿಸಿದರು.
ಅತ್ಯಾಚಾರ ಆರೋಪ ಹೊತ್ತಿರುವ ರಾಘವೇಶ್ವರ ಭಾರತಿಗಳು ಪೀಠತ್ಯಾಗ ಮಾಡಬೇಕು ಎಂದುರಾಮಚಂದ್ರಾಪುರ ಮಠದ ಆಪ್ತ ಎಂ.ಎನ್.ಭಟ್ ಮಧುಗುಣಿ, ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ನೇತೃತ್ವದ ಸಮಾನ ಮನಸ್ಕ ವೇದಿಕೆಯ ಸದಸ್ಯರು ಶನಿವಾರ ಆಗ್ರಹಿಸಿದ್ದರು, ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ ಮಠದ ಕಾರ್ಯದರ್ಶಿ ಗಜಾನನ ಶರ್ಮಾ ಅವರು ಮೇಲ್ಕಂಡ ಹೇಳಿಕೆ ನೀಡಿದ್ದಾರೆ.
ರಾಮಚಂದ್ರಾಪುರದ ಮಠದ ಕಾರ್ಯದರ್ಶಿ ಗಜಾನನ ಶರ್ಮಾ, ಮಠದ ಭಕ್ತ ಗೋಪಾಲಕೃಷ್ಣ ಹೆಗ್ಡೆ ಸುದ್ದಿಗೋಷ್ಠಿ ನಡೆಸಿ ಇದು ಶ್ರೀಗಳ ವಿರುದ್ಧ ನಡೆಸಿರುವ ಸಂಚು, ಆರೋಪಗಳು ಕೇಳಿ ಬಂದ ಮಾತ್ರಕ್ಕೆ ಪೀಠ ತ್ಯಾಗ ಮಾಡಲು ಸಾಧ್ಯವಿಲ್ಲ. ಮೊದಲಿಗೆ ಆರೋಪ ಸಾಬೀತಾಗಲಿ ನಂತರ ಪೀಠ ತ್ಯಾಗದ ಮಾತು ಎಂದಿದ್ದಾರೆ.
ತನಿಖೆಯ ದಿಕ್ಕು ಬದಲಿಸಿ, ಮಠಕ್ಕೆ ಕೆಟ್ಟ ಹೆಸರು ತರುವ ಉದ್ದೇಶವನ್ನು ಸಮಾನ ಮನಸ್ಕ ವೇದಿಕೆ ಮಾಡುತ್ತಿದೆ. ಪ್ರಭಾವ ಬೀರಿ ಮಠದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಗಜಾನನ ಶರ್ಮಾ ಆರೋಪಿಸಿದರು.[ರಾಘವೇಶ್ವರ ಸ್ವಾಮೀಜಿ ಪೀಠತ್ಯಾಗಕ್ಕೆ ಹವ್ಯಕ ವೇದಿಕೆ ಪಟ್ಟು]

ಹೊಸ ಸಾಕ್ಷಿಗಳು ಸೃಷ್ಟಿಯಾಗುತ್ತಿವೆ: ಸಿಐಡಿ ತನಿಖೆಯಲ್ಲಿ ಶ್ರೀಗಳ ಆಪ್ತ ಸಹಾಯಕ ಕೂಡಾ ಯಾವುದೇ ಸಾಕ್ಷಿಯನ್ನು ನೀಡಿಲ್ಲ. ಸಾಕ್ಷಿಗಳ ಮೇಲೆ ಮಠ ಯಾವುದೇ ಪ್ರಭಾವ ಬೀರುತ್ತಿಲ್ಲ. ಈ ಮಧ್ಯೆ ಸಾಕ್ಷಿಗಳು ಬದಲಾಗುತ್ತಿದ್ದು, ಹೊಸ ಸಾಕ್ಷಿಗಳು ಸೃಷ್ಟಿಯಾಗುತ್ತಿವೆ. ಪೀಠ ತ್ಯಾಗ ಒತ್ತಾಯ ಬಾಲಿಶ ಹೇಳಿಕೆ ಎಂದು ಅವರು ಹೇಳಿದರು.
ಮಠದ ಆರ್ಥಿಕ ವಿಭಾಗದ ವಿತ್ತ ಕಾರ್ಯದರ್ಶಿಯಾಗಿದ್ದ ಎಂ.ಎನ್.ಭಟ್ ಮದ್ಗುಣಿಯವರು 2014ರ ನವೆಂಬರ್ ನಲ್ಲಿ ಸಿಐಡಿಗೆ ನೀಡಿದ್ದ ಹೇಳಿಕೆಗೂ ಶನಿವಾರ ನೀಡಿದ ಹೇಳಿಕೆಗೂ ವ್ಯತ್ಯಾಸವಿದೆ. ಅಂದು ಪ್ರೇಮಲತಾ ಅವರು ಉದ್ದೇಶಪೂರ್ವಕವಾಗಿ ಶ್ರೀಗಳಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದಿದ್ದರು. ಅದರೆ, ನಿನ್ನೆ ಯಾವುದೋ ಪ್ರಭಾವಕ್ಕೆ ಒಳಗಾಗಿ ಮಠದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಗಜಾನನ ಶರ್ಮಾ ಹೇಳಿದರು.[169 ಬಾರಿ ರೇಪ್ ಆಗುವವರೆಗೆ ಯಾರಾದ್ರೂ ಸುಮ್ಮನಿರ್ತಾರಾ?]
ರಾಘವೇಶ್ವರ ಶ್ರೀ ಅತ್ಯಾಚಾರ ಆರೋಪ ಕೇಳಿ ಬಂದಾಗ ಪೀಠ ತ್ಯಾಗ ಮಾಡಿ ಏಕಾಂತಕ್ಕೆ ಹೋಗಲು ಒಪ್ಪಿದ್ದರು. ಆದರೆ ನಂತರ ಮನಸ್ಸು ಬದಲಾಯಿಸಿದರು ಎಂದು ನಿನ್ನೆ ಹವ್ಯಕ ಮಹಾ ಸಭಾದ ಮಾಜಿ ಅಧ್ಯಕ್ಷ ಎಂ.ಎನ್. ಭಟ್ ಮದ್ಗುಣಿ ಹೇಳಿದ್ದರು.
ಶ್ರೀಗಳ ಹೇಳಿಕೆ ಮೆಲುಕು: ಸರ್ವಸಂಗವನ್ನು ಪರಿತ್ಯಾಗ ಮಾಡಿದ ನಮಗೆ ಮಾನ ಅಪಮಾನ, ಸಾವು ನೋವು ಎಲ್ಲವೂ ಒಂದೇ. ಹತ್ಯೆಯಲ್ಲಿ ಒಂದಿಷ್ಟು ಹಿಂಸೆ ಅನುಭವಿಸಬಹುದು. ಅದು ಅಲ್ಲಿಗೆ ಮುಗಿದು ಹೋಗುತ್ತದೆ. ಆದರೆ, ಸಾಮಾಜಿಕವಾಗಿ ನೋವುಂಟು ಮಾಡುವುದು ಘೋರ ಕೃತ್ಯ. ಪ್ರತಿಕ್ಷಣವೂ ಸಾಯಿಸುತ್ತಲೇ ಇರುತ್ತದೆ ಎಂದು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications