ನಾಡಪ್ರಭು ಕೆಂಪೇಗೌಡ ಸಮಾಧಿಗೆ ಒಕ್ಕಲಿಗರ ಪಾದಯಾತ್ರೆ
ಬೆಂಗಳೂರು, ನವೆಂಬರ್, 25: ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ರಚನೆ, ಕೆಂಪೇಗೌಡರ ಸಮಾಧಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಒತ್ತಾಯಿಸಿ ರಾಜ್ಯ ಒಕ್ಕಲಿಗ ಸಂಘ ನವೆಂಬರ್ 30ರಂದು ಮಾಗಡಿಯಿಂದ ಕೆಂಪಾಪುರದ ಕೆಂಪೇಗೌಡ ಸಮಾಧಿ ಸ್ಥಳದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಾ. ಅಪ್ಪಾಜಿ ಗೌಡ, ಕನ್ನಡ ನಾಡಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಅದ್ಭುತ ಕಾಣಿಕೆಗಳನ್ನು ನೀಡಿರುವ ಕೆಂಪೇಗೌಡರ ಸಾಧನೆಯನ್ನು ನಿರ್ಲಕ್ಷಿಸುವ ಮನೋಭಾವ ಬೆಳೆಯುತ್ತಿದೆ. ಅದನ್ನು ತೊಡೆದು ಹಾಕಿ ಕೆಂಪೇಗೌಡರ ಹೆಸರು ಎಂದೆಂದಿಗೂ ಅಜರಾಮರ ಆಗಿರುವಂತೆ ಮಾಡಲು ಪಾದಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.[ನಮ್ಮ ಮೆಟ್ರೋ ಇನ್ನು ಮುಂದೆ ಕೆಂಪೇಗೌಡ ಮೆಟ್ರೋ?]

ಪಾದಯಾತ್ರೆಯ ನೇತೃತ್ವವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ಪಾದಯಾತ್ರೆಯು ಕೆಂಪೇಗೌಡರು ನಿರ್ಮಿಸಿದ ಕೋಟೆ ಮಾರಮ್ಮ ದೇವಾಲಯದಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾಗಲಿದ್ದು, ಕೆಂಪಾಪುರದ ಬಳಿಯಿರುವ ಸಮಾಧಿವರೆಗೂ ನಡೆಯಲಿದೆ ಎಂದು ಎಂದು ತಿಳಿಸಿದರು.[ಬೆಂದಕಾಳೂರು ಹೇಗೆ ಬೆಂಗಳೂರಾಯಿತು]

ಕೆಂಪೇಗೌಡರ ಆಡಳಿತ ದೂರದರ್ಶಿತ್ವ ಮತ್ತು ಪರಂಪರೆಯನ್ನು ಮತ್ತೆ ಬಿಂಬಿಸಲು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸರ್ಕಾರ ರಚಿಸಬೇಕು. ಕೆಂಪೇಗೌಡರ ಕಾಲದ ಇತಿಹಾಸವನ್ನು ಸಮಗ್ರವಾಗಿ ರಚಿಸಿ, ನಮ್ಮ ನಾಡಿಗೆ ಅವರ ಕೊಡುಗೆಯನ್ನು ಎತ್ತಿ ತೋರಿಸಬೇಕು. ನಾಡಪ್ರಭುಗಳು ನಿರ್ಮಿಸಿದ ಕೋಟೆ, ಕೆರೆಕಟ್ಟೆ, ಸ್ಮಾರಕಗಳ ಜೀರ್ಣೋದ್ಧಾರ ಮಾಡಬೇಕು, ಕೆಂಪೇಗೌಡರು ಕಲೆ, ಸಾಹಿತ್ಯ, ಸಹಬಾಳ್ವೆ ಹಾಗೂ ಜನಜೀವನ ವಿಧಾನಕ್ಕೆ ನೀಡಿದ ಕೊಡುಗೆ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಪಾದಯಾತ್ರೆಯಲ್ಲಿ ಒತ್ತಾಯಿಸಲಾಗುವುದು ಎಂದು ಅಪ್ಪಾಜಿ ಗೌಡ ತಿಳಿಸಿದರು.












Click it and Unblock the Notifications