ಜುಲೈ ಕೊನೆಗೆ ರಾಜಕೀಯ ಪ್ರವೇಶ ಘೋಷಣೆ: ಸುಳಿವು ಕೊಟ್ಟ ರಜನಿ ಸಹೋದರ
ಬೆಂಗಳೂರು, ಮೇ 27: ನಟ ರಜನೀಕಾಂತ್ ರ ರಾಜಕೀಯ ಪ್ರವೇಶವು ಜುಲೈ ಕೊನೆ ಹೊತ್ತಿಗೆ ಅಂತಿಮವಾಗುತ್ತದೆ ಎಂಬ ಸಂಗತಿಯನ್ನು ಬೆಂಗಳೂರಿನಲ್ಲಿ ವಾಸವಿರುವ ರಜನಿ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಹೇಳಿದ್ದಾರೆ.
ರಜನೀಕಾಂತ್ ರಾಜಕೀಯಕ್ಕೆ ಬರಬೇಕು ಅನ್ನೋದು ಜನರ ಆಶಯ. ಈಗಷ್ಟೇ ಅಭಿಮಾನಿಗಳು ಹಾಗೂ ಹಿತೈಷಿಗಳನ್ನು ಭೇಟಿಯಾಗಿ ಮೊದಲ ಸುತ್ತಿನ ಚರ್ಚೆ ಮುಗಿಸಿದ್ದಾರೆ ಎಂದು ಸತ್ಯನಾರಾಯಣ್ ರಾವ್ ಹೇಳುವ ಮೂಲಕ ರಜನಿ ರಾಜಕೀಯ ಪ್ರವೇಶವನ್ನು ಖಾತ್ರಿ ಪಡಿಸಿದ್ದಾರೆ.
ರಾಜಕೀಯ ಪ್ರವೇಶದ ಬಗ್ಗೆ ನೇರವಾಗಿ ಏನನ್ನೂ ಹೇಳದ ರಜನೀಕಾಂತ್, ತಮಿಳುನಾಡು ರಾಜಕಾರಣದಲ್ಲಿ ಬದಲಾವಣೆ ತರಬೇಕು ಎಂದಿದ್ದರು. ಅಷ್ಟೇ ಅಲ್ಲ, ಯುದ್ಧದ ಸಂದರ್ಭದಲ್ಲಿ ಕರೆಯುತ್ತೀನಿ, ಎಲ್ಲರೂ ಸಿದ್ಧವಾಗಿರಿ ಎಂದು ಹೇಳುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರು.

ಆ ಹಿನ್ನೆಲೆಯಲ್ಲಿ ಸತ್ಯನಾರಾಯಣ್ ರಾವ್ ಹೇಳಿಕೆಗೆ ಮಹತ್ವ ಸಿಕ್ಕಿದೆ. ಜೂನ್ ಹಾಗೂ ಜುಲೈನಲ್ಲಿ ಇನ್ನೊಂದಿಷ್ಟು ಚರ್ಚೆ ಹಾಗೂ ಭೇಟಿಗಳು ನಡೆಯುತ್ತವೆ. ಆನಂತರ ರಾಜಕೀಯ ಪ್ರವೇಶ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಪರ್ವ ಶುರುವಾಗುತ್ತದೆ ಎಂದು ರಜನಿ ಸಹೋದರ ಹೇಳಿದ್ದಾರೆ.












Click it and Unblock the Notifications