Bengaluru Rain: ಬೆಂಗಳೂರಿನಲ್ಲಿ ಮಳೆ ಆರಂಭ: ಹಬ್ಬದ ವ್ಯಾಪಾರಕ್ಕೆ ಅಡ್ಡಿ- ವ್ಯಾಪಾರಿಗಳ ಮೊಗದಲ್ಲಿ ಮಾಸಿದ ನಗು!
ಬೆಂಗಳೂರು ಅಕ್ಟೋಬರ್ 10: ಹಬ್ಬದ ಮೂಡ್‌ನಲ್ಲಿರುವ ಬೆಂಗಳೂರಿಗರಿಗೆ ವರುಣ ಬೇಸರ ತಂದಿದ್ದಾನೆ. ದಸರಾ ಹಬ್ಬದ ತಯಾರಿಯಲ್ಲಿರುವ ಜನರಿಗೆ ಮಳೆ ಅಡ್ಡಿಯನ್ನುಂಟುಮಾಡಿದೆ. ಅಲ್ಲದೆ ವ್ಯಾಪಾರಿಗಳಿಗೂ ಮಳೆ ಬೇಸರ ತಂದಿದೆ. ಹೌದು... ನವರಾತ್ರಿ ಹಬ್ಬ ಹತ್ತಿರದಲ್ಲಿ ಇರುವಾಗಲೇ ಮಳೆ ಜೋರಾಗಿದ್ದು ವ್ಯಾಪಾರಿಗಳಿಗೆ ತುಂಬಾ ತೊಂದರೆಯನ್ನುಂಟು ಮಾಡಿದೆ.
ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹೂವು, ಹಣ್ಣುಗಳ ಬೆಲೆ ಎಂದಿಗಿಂತ ಕೊಂಚ ಅಧಿಕವಾಗಿರುತ್ತದೆ. ಆದರೆ ಈ ಬಾರಿ ಹಬ್ಬಕ್ಕೆ ಅಗತ್ಯವಾಗಿ ಬೇಕಾಗುವ ಹೂವು ಹಣ್ಣಿನ ಬೆಲೆ ಅಧಿಕವಾಗಿದ್ದರೂ ವ್ಯಾಪಾರಕ್ಕೆ ಮಳೆ ಬಿಡುತ್ತಿಲ್ಲ. ಬೆಂಗಳೂರಿನಲ್ಲಿಂದು ಧಾರಾಕಾರವಾಗಿ ಮಳೆಯಾಗುತ್ತಿದ್ದು, ವ್ಯಾಪಾರಿಗಳ ವ್ಯಾಪಾರಕ್ಕೆ ಮಳೆ ತೊಂದರೆಯನ್ನುಂಟು ಮಾಡಿದೆ. ಅಲ್ಲದೆ ಗ್ರಾಹಕರು ಕೂಡ ಮಾರುಕಟ್ಟೆಗೆ ತೆರಳಲು ಹಿಂದೇಟು ಹಾಕುವಂತಾಗಿದೆ.

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಹಬ್ಬದ ಮೂಡ್ ಅನ್ನು ಹಾಳು ಮಾಡುತ್ತಿದೆ. ದಸರಾ ಹಬ್ಬ ಬಂದರೆ ರಸ್ತೆ ಬದಿ ಹೂವು, ಹಣ್ಣು, ತರಕಾರಿ ಮಾರಾಟ ಜೋರಾಗಿರುತ್ತದೆ. ಆದರೆ ಈ ಬಾರಿ ರಸ್ತೆ ಬದಿ ವ್ಯಾಪಾರಕ್ಕೆ ಮಳೆರಾಯ ಅನುವು ಮಾಡಿಕೊಡುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾರಾಟಕ್ಕೆಂದು ತಂದ ಹೂವುಗಳನ್ನು ಮಳೆಯಿಂದಾಗಿ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಈಗಾಗಲೇ ಬೆಲೆ ಏರಿಕೆಗೆ ಜನ ಹಬ್ಬದ ಖರೀದಿಗೆ ಹಿಂದೇಟಾಕುತ್ತಿದ್ದಾರೆ. ಹೀಗಿರುವಾಗ ಮಳೆಯಿಂದಾಗಿ ಬೆಲೆ ದುಪ್ಪಟ್ಟಾದರೆ ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಪಾರಿಗಳಿಗೆ ಮಳೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ.
ಬೆಂಗಳೂರಿನಲ್ಲಿ ಈಗಾಗಲೇ ರಸ್ತೆ ಇಕ್ಕಲುಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಮಾರಾಟಕ್ಕೆ ವ್ಯಪಾರಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಣ್ಣ ಪುಟ್ಟ ಬಂಡಿ, ಸೈಕಲ್ ಹಾಗೂ ನೆಲದ ಮೇಲೆ ಕುಳಿತು ವ್ಯಾಪಾರಕ್ಕಾಗಿ ವಸ್ತುಗಳನ್ನು ತಂದು ವ್ಯವಸ್ಥಿತವಾಗಿ ಜೋಡಿಸಿಕೊಂಡಿದ್ದಾರೆ. ಆದರೆ ಮಳೆ ವ್ಯಾಪಾರ ಮಾಡಲು ಬಿಡುತ್ತಿಲ್ಲ. ನಿತ್ಯ ಮಧ್ಯಾಹ್ನದಿಂದಲೇ ಮಳೆ ಜೋರಾಗುತ್ತಿದೆ.

ಮಳೆ ಮೋಡ ಕವಿದ ವಾತಾವರಣದಿಂದಾಗಿ ಹೂವುಗಳು ಬಾಡಿ ಹೋಗಿವೆ. ಹೆಚ್ಚಿನ ಬೆಲೆಗೆ ಅವುಗಳನ್ನು ಮಾರಾಟ ಮಾಡುವುದರಿಲಿ ಕಡಿಮೆ ಬೆಲೆಗೂ ಹೂವು ಮಾರಾಟವಾಗದಂತಹ ಸ್ಥಿತಿ ಇದೆ. ಹೀಗಾಗಿ ವ್ಯಾಪಾರಿಗಳು ಲಾಭ ಇರಲಿ, ಹಾಕಿದ ಬಂಡಾವಳವನ್ನು ವಾಪಸ್ ಪಡೆದರೆ ಸಾಕು ಎನ್ನುವಂತಾಗಿದ್ದಾರೆ.
ಇನ್ನೂ ಮೂರು ನಾಲ್ಕು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮಾಹಿತಿಯನ್ನು ಹಂಚಿಕೊಂಡಿದೆ. ಅಕ್ಟೋಬರ್ 12ರಂದು ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಇಂದಿನಿಂದಲೇ (ಅಕ್ಟೋಬರ್ 10) ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಳೆ ಜೋರಾಗಿದ್ದು ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಮಳೆಯಿಂದಾಗಿ ಜನ ಕೂಡ ಹಬ್ಬದ ಖರೀದಿಯನ್ನು ಕಡಿಮೆ ಮಾಡುವ ಭೀತಿ ಶುರುವಾಗಿದೆ. ಒಂದು ವೇಳೆ ಹೀಗೆ ಮಳೆ ಮುಂದುವರೆದರೆ ವ್ಯಾಪಾರಿಗಳಿಗೆ ಈ ಬಾರಿ ದೊಡ್ಡ ನಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ರಾಮನಗರ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications