ರೈನ್‌ಬೋ ಲೇಔಟ್: 35 ಅತಿಕ್ರಮ ಪತ್ತೆ, ತೆರವಿಗಾಗಿ ಸೆ.13ರಂದು ಸಭೆ
ಬೆಂಗಳೂರು ಸೆಪ್ಟಂಬರ್ 12: ರಾಜಕಾಲುವೆ ಒತ್ತುವರಿ ಮಾಡಿಕೊಂಡ ಆರೋಪ ಮೇರೆಗೆ ಇತ್ತೀಚೆಗೆ ನಗರದ ಸರ್ಜಾಪುರ ರಸ್ತೆಯ ರೈನ್‌ಬೊ ಡ್ರೈವ್ ಲೇಔಟ್‌ನ 13 ವಿಲ್ಲಾಗಳಿಗೆ ನೋಟಿಸ್ ನೀಡಲಾಗಿದೆ. ಇದರ ಬೆನ್ನಲ್ಲೆ ಸಮೀಕ್ಷೆ ನಡೆಸಿರುವ ಅಧಿಕಾರಿಗಳು 35ಅತಿಕ್ರಮಗಳನ್ನು ಗುರುತಿಸಿದ್ದಾರೆ.
ಇಲ್ಲಿನ ನಿವಾಸಿಗಳು ರಾಜಕಾಲುವೆಯ ಕಲ್ವರ್ಟ್ ಅನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಲ್ಲಲು ಕಾರಣವಾಗಿದೆ. ಒಳಚರಂಡಿ, ರಾಜಕಾಲುವೆಯ ಈ ಸಮಸ್ಯೆಯಿಂದಾಗಿ ವಾರಗಟ್ಟಲೇ ರೈನ್‌ಬೋ ಡ್ರೈವ್ ಬಡಾವಣೆ ಜಲಾವೃತಗೊಂಡಿದೆ. ಇದೀಗ ನೋಟಿಸ್ ನೀಡಿದ ಬೆನ್ನಲ್ಲೆ ಸಮೀಕ್ಷೆ ಆರಂಭಿಸಿದ್ದೇವೆ. 35 ಅತಿಕ್ರಮಗಳನ್ನು ಪತ್ತೆ ಮಾಡಲಾಗಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ತಿಳಿಸಿದ್ದಾರೆ.
ರೈನ್‌ಬೋ ಡ್ರೈವ್ ಲೇಔಟ್ ಬಳಿ ಇರುವ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಕೆರೆಗಳ ಬಳಿ ಅತಿಕ್ರಮ ಮಾಡಿರುವುದು ಸಾಬೀತಾಗಿದೆ. ಒತ್ತುವರಿ ಮಾಡಿದ ಆಸ್ತಿಗಳು ಜುನ್ನಸಂದ್ರ ಸರ್ವೆ ವ್ಯಾಪ್ತಿಗೆ ಒಳಪಡುತ್ತವೆ. ಈ ಒತ್ತುವರಿ ತೆರವು ಕುರಿತು ಸೆಪ್ಟಂಬರ್ 13ರಂದು ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಜತೆ ಸಭೆ ನಡೆಯಲಿದೆ. ಸಭೆಯಲ್ಲಿ ಚರ್ಚಿಸಿ ನೀರು ಹರಿಯಲು ತಡೆಯೊಡ್ಡುತ್ತಿರುವ ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಲಿದ್ದೇವೆ ಎಂದರು.

ಒಂದೂವರೆ ತಿಂಗಳಲ್ಲಿ 4ಬಾರಿ ಜಲಾವೃತ
ಹಾಲನಾಯಕನಹಳ್ಳಿ ಕೆರೆಯು ಜುನ್ನಸಂದ್ರ ಕೆರೆ ಮತ್ತು ಸೌಲ್ ಕೆರೆಗೆ ಸಂಪರ್ಕ ಕಲ್ಪಿಸುವ ಕೆರೆ ಆಗಿದೆ. ಹಾಲನಾಯಕನಹಳ್ಳಿ ಕೆರೆಯ ಬಳಿ ಸರ್ಜಾಪುರ ರಸ್ತೆಯಲ್ಲಿ ಈ ರೈನ್‌ಬೋ ಡ್ರೈವ್ ಬಡಾವಣೆ ಇದೆ. ಇಲ್ಲಿ ಮುಂಗಾರು ಆರಂಭವಾದ ನಂತರ ಕಳೆದ ಆಗಸ್ಟ್‌ನಿಂದ ಈವರೆಗೆ ಒಟ್ಟು ನಾಲ್ಕು ಬಾರಿ ಬಡಾವಣೆಗೆ ನೀರು ನುಗ್ಗಿದೆ ಆವಾಂತರ ಸೃಷ್ಟಿಸಿದೆ.
ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾನವಾಗಿತ್ತು. ವಿಲ್ಲಾಗಳು, ಮನೆಗಳಿಗೆ ನೀರು ನುಗ್ಗಿತ್ತು. ವಾಹನಗಳು ಮುಳುಗಡೆ ಆಗಿದ್ದರಿಂದ ನಿವಾಸಿಗಳು ಟ್ರ್ಯಾಕ್ಟರ್ ಮೂಲಕ ಮಕ್ಕಳನ್ನು ಶಾಲೆ ಬಿಟ್ಟು ಬಂದಿದ್ದರು. ಅಗತ್ಯ ವಸ್ತುಗಳ ಖರೀದಿಗೂ ಕೆಲ ದಿವಸ ಟ್ರ್ಯಾಕ್ಟರ್‌ಗಳೇ ಆಸರೆಯಾಗಿತ್ತು. ಈ ಸಂಬಂಧ ನಮ್ಮತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಆಗಸ್ಟ್ ಮೊದಲ ವಾರವೇ ಬಡಾವಣೆ ನಿವಾಸಿಗಳು ಪ್ರತಿಭಟಿಸಿದ್ದರು.
ಸಭೆ ಬಳಿಕ ಅಂತಿಮ ನಿರ್ಧಾರ
ಇಲ್ಲಿನ ನಿವಾಸಿಗಳ ಪ್ರಕಾರ ಈ ಬಡಾವಣೆಯನ್ನು ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಒಟ್ಟು 36 ಎಕರೆಗಳಲ್ಲಿ ಹರಡಿರುವ ಬಡಾವಣೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿವೆ. ಇದು ಸಹ ಐಶಾರಾಮಿ ಸ್ಥಳಗಳಲ್ಲಿ ಒಂದಾಗಿದೆ. ಮಳೆಯಿಂದಾಗಿ ಇಲ್ಲಿ ಪದೇ ಪದೆ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಇದೀಗ 13 ವಿಲ್ಲಾಗಳಿಗೆ ನೋಟಿಸ್ ನೀಡಲಾಗಿದೆ.
ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ ಇಲ್ಲಿನ ನಿವಾಸಿಗಳಿಗೆ ಜಿಲ್ಲಾಡಳಿತ ಅನುಕೂಲ ಮಾಡಲಿದೆ. ಅದಕ್ಕಾಗಿ ನೀರು ಹರಿದು ಹೋಗುವ ಪ್ರದೇಶಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಂಗಳವಾರ ಸಭೆಯಲ್ಲಿ ಅಂತಿಮ ನಿರ್ಣಯ ಹೊರಬರುವ ಸಾಧ್ಯತೆ ಇದೆ.
ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಕಳೆದ ಮೂರು ದಿನದಿಂದ ಮಹಾದೇವಪುರ, ಯಮಲೂರು ಭಾಗದಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದಾರೆ. ಈ ಒತ್ತುವರಿ ತೆರವು ಕಾರ್ಯ ಮೂರನೇ ದಿನವು ಮಾರತ್ತಹಳ್ಳಿಯಲ್ಲಿ ಮುಂದುವರಿದಿದೆ.












Click it and Unblock the Notifications