ಮಳೆ: ಎಲ್ಲಾ ಐಟಿ - ಬಿಟಿ, ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಅ.23 ಮನೆಯಿಂದಲೇ ಕೆಲಸ!
Work from Home (WFH): ರಾಜ್ಯದಲ್ಲಿ ಅಕ್ಟೋಬರ್ 27ರ ವರೆಗೆ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಬೆಂಗಳೂರಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಐಟಿ - ಬಿಟಿ ಹಾಗೂ ಖಾಸಗಿ ಕಂಪನಿಗಳಿಗೆ ವರ್ಕ್‌ಫ್ರಮ್ ಹೋಮ್ ನೀಡುವುದಕ್ಕೆ ಸರ್ಕಾರವೇ ಸೂಚಿಸಿದೆ.
ಬೆಂಗಳೂರಲ್ಲಿ ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದಂತೆ ಮಳೆಯಾಗುತ್ತಿದೆ. ಈ ನಡುವೆ ಮಳೆ ತುಸು ಬಿಡುವು ಕೊಟ್ಟಿತ್ತು. ಆದರೆ, ಸೋಮವಾರ ರಾತ್ರಿ ಹಾಗೂ ಮಂಗಳವಾರ ಧಾರಾಕಾರ ಮಳೆಯಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ಹೋಗಿದೆ. ಬುಧವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವರ್ಕ್‌ಫ್ರಮ್ ಹೋಮ್ ನೀಡಲಾಗುತ್ತಿದೆ.

ಬೆಂಗಳೂರಿನ ಎಲ್ಲಾ ಐಟಿ - ಬಿಟಿ ಹಾಗೂ ಖಾಸಗಿ ಕಂಪನಿಗಳಿಗೆ ರಾಜ್ಯ ಸರ್ಕಾರವು ಮಾರ್ಗಸೂಚಿ (Advisory) ಬಿಡುಗಡೆ ಮಾಡಿದೆ. ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬುಧವಾರ ವರ್ಕ್‌ಫ್ರಮ್ (ಮನೆಯಲ್ಲೇ ಕೆಲಸ)ಗೆ ಸಲಹೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯು ಬೆಂಗಳೂರಿನಲ್ಲಿ ಅಕ್ಟೋಬರ್ 22ರಿಂದ 23ರ ವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ ಅಲ್ಲದೇ, ಬುಧವಾರ ಯೆಲ್ಲೋ ಅಲರ್ಟ್ ಸಹ ನೀಡಲಾಗಿದೆ. ಅಲ್ಲದೇ ಈ ಅವಧಿಯಲ್ಲಿ ಧಾರಾಕಾರ ಮಳೆಯಿಂದ ತೊಂದರೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಐಟಿ - ಬಿಟಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸುರಕ್ಷತೆ ಮತ್ತು ರಕ್ಷಣೆಯ (ಯೋಗಕ್ಷೇಮ)ವಿಷಯವನ್ನು ಮುಖ್ಯವಾಗಿದೆ. ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಐಟಿ - ಬಿಟಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗೂ ಅಕ್ಟೋಬರ್ 23ರಂದು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರ ಹೇಳಿದೆ.
ಹಲವು ಕಂಪನಿಗಳಿಂದ ವರ್ಕ್‌ಫ್ರಮ್ ಹೋಮ್: ಇನ್ನು ಹಲವು ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಿಸಿವೆ. ಸೋಮವಾರ ಹಾಗೂ ಮಂಗಳವಾರ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಧಿಯನ್ನು ಹಲವು ಕಂಪನಿಗಳು ಈಗಾಗಲೇ ಮುಂದುವರಿಸಿವೆ. ಈ ನಡುವೆ ಸರ್ಕಾರ ಸಹ ಸೂಚನೆ ನೀಡಿರುವುದರಿಂದ ಬುಧವಾರ ಸಹ ಮನೆಯಿಂದಲೇ ಕೆಲಸಕ್ಕೆ ಅವಕಾಶ ಸಿಗಲಿದೆ.
ಬುಧವಾರವೂ ಜೋರು ಮಳೆ: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬುಧವಾರವೂ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಶುಕ್ರವಾರದ ವರೆಗೆ ವರುಣಾರ್ಭಟ ಜೋರಾಗಿ ಇರಲಿದ್ದು, ಇದಾದ ನಂತರ ತುಸು ಇಳಿಯುವ ಸಾಧ್ಯತೆ ಇದೆ. ಬುಧವಾರ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಶಾಲಾ - ಕಾಲೇಜುಗಳಿಗೆ ರಜೆ: ಬೆಂಗಳೂರಲ್ಲಿ ಧಾರಾಕಾರ ಮಳೆ ಆಗ್ತಿದೆ. ಹೀಗಾಗಿ, ಬುಧವಾರವೂ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ರಜೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರದಂದು ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸಿಕೊಳ್ಳಲು ಸೂಚನೆ ನೀಡಲಾಗಿದೆ.












Click it and Unblock the Notifications