Bengaluru Rain: ಸಿಲಿಕಾನ್ ಸಿಟಿಗೆ ಮತ್ತೆ ವರುಣನ ಎಂಟ್ರಿ: ನಗರದ ಹಲವೆಡೆ ಚಳಿಯೊಂದಿಗೆ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಕೊಂಚ ಬಿಡುವು ಪಡೆದಿದ್ದ ಮಳೆ ಈಗ ಮತ್ತೆ ಶುರುವಾಗಿದೆ. ಇಂದು ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಈಗ ಮಳೆ ಆರಂಭವಾಗಿದೆ. ಈ ದಿನ ನಗರದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ. ಹಾಗಾದರೆ ಬೆಂಗಳೂರಿನಲ್ಲಿಂದು ಎಲ್ಲೆಲ್ಲಿ ಮಳೆ ಬೀಳಲಿದೆ. ರಾಜ್ಯದ ಮಳೆ ಸ್ಥಿತಿಗತಿಗಳೇನು ಎನ್ನುವುದನ್ನು ತಿಳಿಯೋಣ.
ನವೆಂಬರ್ ತಿಂಗಳ ಅಂತ್ಯದಲ್ಲಿ ಚಳಿ ಹೆಚ್ಚಾಗಿರುತ್ತದೆ. ಆದರೀಗ ಚಳಿಯೊಂದಿಗೆ ಮಳೆ ಬೀಳುತ್ತಿದ್ದು ಬೆಂಗಳೂರಿನ ವಾತಾವರಣ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ನಗರದ ಕೆಆರ್ ಮಾರುಕಟ್ಟೆ, ರಾಜಾಜಿನಗರ, ರಾಜರಾಜೇಶ್ವರಿ ನಗರ, ವಿಜಯನಗರ, ಮೆಜೆಸ್ಟಿಕ್‌ನಲ್ಲಿ ತುಂತುರು ಮಳೆ ಬೀಳಲಾರಂಭಿಸಿದೆ. ಮೋಡ ಕವಿದ ವಾತಾವರಣದಿಂದಾಗಿ ಚಳಿ ಹೆಚ್ಚಾಗಿದ್ದು, ಜಿಟಿ ಜಿಟಿ ಮಳೆಯಿಂದಾಗಿ ಸಂಜೆಗೆ ನಗರದಲ್ಲಿ ಮಂಜು ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹೆಚ್ಚಿನ ಸ್ಥಳಗಳಲ್ಲಿ ತುಂತುರು ಮತ್ತು ಇನ್ನೂ ಕೆಲ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ರಾಜ್ಯದಲ್ಲಿ ಮಳೆ ಸ್ಥಿತಿಗತಿ ಹೇಗಿದೆ ತಿಳಿಯೋಣ.
ರಾಜ್ಯದ ಕೆಲವೆಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಲ್ಕು ಜಿಲ್ಲೆಗಳಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಂಡ್ಯ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಲ್ಲದೆ ನವೆಂಬರ್ 15ರಂದು ಹಾಸನ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ದಿನ ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ್ ಮತ್ತು ಕೊಡಗು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇನ್ನೂ ನವೆಂಬರ್ 16ರಂದು ಕರಾವಳಿಯ ಹಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರೆಡು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವುದನ್ನು ನಿರೀಕ್ಷಿಸಲಾಗಿದೆ. ಜೊತೆಗೆ ನವೆಂಬರ್ 17, 18ರಂದು ದಕ್ಷಿಣ ಒಳನಾಡಿನ ಒಂದೆರೆಡು ಕಡೆ ಮಳೆ ಬೀಳಲಿದ್ದು, ಉತ್ತರ ಒಳನಾಡಿನ ಮೇಲೆ ಒಣಹವೆ ಇರಲಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳು ಮತ್ತು ಚೆನ್ನೈ ನಗರದಲ್ಲಿ ಕಳೆದ ದಿನ ಭಾರೀ ಮಳೆಯಾಗಿದೆ. ಇದರಿಂದಾಗಿ ನವೆಂಬರ್ 16ರವರೆಗೂ ತಮಿಳುನಾಡು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚೆನ್ನೈನಲ್ಲೂ ಭಾರೀ ಮಳೆಯಾಗಿದ್ದು, ತಮಿಳುನಾಡು ರಾಜಧಾನಿ ಚೆನ್ನೈನ ಅಡ್ಯಾರ್, ಮೀನಂಬಾಕ್ಕಂ ಮತ್ತು ನಂದನಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆರು ಸೆ.ಮೀ ಮಳೆ ದಾಖಲಾಗಿದೆ. ಇದರ ಎಫೆಕ್ಟ್ ಕರ್ನಾಟಕದ ಮೇಲಾಗಲಿದ್ದು ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ.












Click it and Unblock the Notifications