ಬಳ್ಳಾರಿಯಲ್ಲಿ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ! ಸರ್ಕಾರ ಯಾರನ್ನು ರಕ್ಷಿಸುತ್ತಿದೆ?
ಬೆಂಗಳೂರು, ನವೆಂಬರ್ 29: ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೀಗಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ. ತಜ್ಞರ ತಂಡ ತನಿಖೆ ಮಾಡಿ ನೀಡಿರುವ ವರದಿಯನ್ನು ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಏಕೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ 5 ಬಾಣಂತಿ ಮಹಿಳೆಯರ ಸಾವಾಗಿದೆ. ಇದರ ಕುರಿತು ಶುಕ್ರವಾರ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರು ಮೃತಪಟ್ಟಿದ್ದಾರೆ. ಈ ಪ್ರಕರಣ ಈ ಬಗ್ಗೆ ತಜ್ಞರ ತಂಡವು ತನಿಖೆ ಮಾಡಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿ ಸ್ವೀಕರಿಸಿರುವ ರಾಜ್ಯ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರದ ತಪ್ಪಿನಿಂದ ಆಗಿರುವ ಅನಾಹುತ, ಆರೋಪಿಗಳನ್ನು ಮುಚ್ಚಿಡುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ವೈದ್ಯಕೀಯ ಸರಬರಾಜು ನಿಗಮದಿಂದ ಸುತ್ತೋಲೆ
ಜಿಲ್ಲಾಸ್ಪತ್ರೆಗಳಲ್ಲಿಯೇ ಸರಣಿ ಸವಾಗಿದೆ. ನವೆಂಬರ್ 16ರಂದು ಖಾಸಗಿ ಕಂಪನಿಯೊಂದು ಸರಬರಾಜು ಮಾಡಿರುವ Ringer Lactate Infusion ಔಷಧಿ ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸುತ್ತೋಲೆ ಹೊರಡಿಸಿದೆ ಎಂದು ಅವರು ಸುತ್ತೋಲೆ ಪೋಸ್ಟ್ ಮಾಡಿದ್ದಾರೆ. ಹಾಗಾದರೆ ಕಳಪೆ ಔಷಧಿ ಸರಬರಾಜು ಆಗಿತ್ತೆ? ಇದೆಲ್ಲವನ್ನು ವೈದ್ಯಾಧಿಕಾರಿಗಳು ಗಮನಿಸಿಲ್ಲವೇ? ಅಥವಾ ಸರ್ಕಾರಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವಾಯಿತೇ? ಎಂಬುದು ತಿಳಿಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೂ ಈ ಸುತ್ತೋಲೆಗೂ ಏನಾದರೂ ಸಂಬಂಧವಿದೆಯೇ? ಎಂದಿರುವ ಆರ್.ಅಶೋಕ್ ಅವರು, ಈ ಕಳಪೆ ಗುಣಮಟ್ಟದ ಔಷಧಿ ಪೂರೈಕೆಗೆ, ಬಳಕೆಗೆ ಹೊಣೆ ಯಾರು? ಸರ್ಕಾರ ವರದಿಯನ್ನು ಮುಚ್ಚಿಡುವ ಮೂಲಕ ಯಾರನ್ನು ರಕ್ಷಿಸುತ್ತಿದೆ? ಎಂದು ಖಾರವಾಗಿ ಪ್ರಶ್ನಿಸಿದರು.

ಬಳ್ಳಾರಿಯತ್ತ ತಿರುಗಿ ನೋಡದ ಸರ್ಕಾರ, ಜನಪ್ರತಿನಿಧಿಗಳು
ಇಡೀ ಕರ್ನಾಟಕವೇ ಬೆಚ್ಚಿ ಬೀಳುವ ಇಂತಹ ಆಘಾತಕಾರಿ ಘಟನೆ ನಡೆದಿದ್ದರೂ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈ ಪ್ರಕರಣ, ಆರೋಪಿಗಳು ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಠ ಪಕ್ಷ ಸಂತಾಪ ಕೂಡ ಸೂಚಿಸಿಲ್ಲ. ಇನ್ನು ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಸಹ ತಮ್ಮ ಜಿಲ್ಲೆಗೆ ಭೇಟಿ ನೀಡಿಲ್ಲ. ಪರಿಸ್ಥಿತಿಯ ಮಾಹಿತಿ ಪಡೆಯುವುದು, ಮೃತರ ಕುಟುಂಬಸ್ಥರಿಗೆ ಧೈರ್ಯ ಹೇಳುವ ಗೋಜಿಗೆ ಹೋಗಿಲ್ಲ ಎಂದು ಅವರ ಹರಿಹಾಯ್ದರು.
ಈ ಪ್ರಕರಣದ ನೈತಿಕೆ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ
ಶರಣ ಪ್ರಕಾಶ್ ಪಾಟೀಲ್ ಅವರು ಸಹ ರಾಜೀನಾಮೆ ನೀಡಬೇಕು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಮೃತ ಬಾಣಂತಿಯರ ಹಸುಳೆಗಳು ಅನಾಥ
ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಮಹಿಳೆಯರ ಪೈಕಿ ಹತ್ತು ದಿನದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಈ ಪ್ರಕರಣ ಗಂಭೀರತೆ ಪಡೆದಿದ್ದು, ರಾಜ್ಯದ ಅರೋಗ್ಯ ವಲಯದಲ್ಲಿ ಆತಂಕ ಸೃಷ್ಟಿಯಾಗುವಂತೆ ಮಾಡಿದೆ. ವೈದ್ಯರ ನಿರ್ಲಕ್ಷ್ಯೆಯಿಂದ ಸೋಂಕು ತಗುಲಿ ಮೃತಪಟ್ಟಿದ್ದಾಗಿ ಅನುಮಾನ ವ್ಯಕ್ತವಾಗಿದೆ. ಬಾಣಂತಿಯರ ಹಸುಗೂಸು ಅನಾಥವಾಗಿವೆ. ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ಪರಿಣಗಿಸಬೇಕು. ಪ್ರತಿ ಜಿಲ್ಲಾಸ್ಪತ್ರೆಗಳ ಮೇಲೆ ಹೆಚ್ಚುವರಿ ನಿಗಾ ವಹಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.












Click it and Unblock the Notifications