ಬೆಸ್ಕಾಂ ನಿರ್ಲಕ್ಷ್ಯಕ್ಕೆ ಅಂಧಕಾರಕ್ಕೆ ತಳ್ಳಿದ ಅಪ್ಪ ಮಗನ ಜೀವ!
ಬೆಂಗಳೂರು, ಫೆ. 23: ಬೆಸ್ಕಾಂ ನಿರ್ಲಕ್ಷ್ಯದಿಂದ ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ನಾಲ್ಕು ವರ್ಷದ ಮಗು ಹಾಗೂ ಬಾಲಕನ ತಂದೆ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.
ಧನಂಜಯ್ ಹಾಗೂ ಇವರ ನಾಲ್ಕು ವರ್ಷದ ಬಾಲಕ ತನ್ಮಯ್ ಗಾಯಗೊಂಡವರು. ಈ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್ಐರ್ ದಾಖಲಾಗಿದೆ.
ಫೆ. 10 ರಂದು ಬೆಳಗ್ಗೆ ಆರ್‌ಬಿಐ ಲೇಔಟ್ ನ 19 ನೇ ಕ್ರಾಸ್ ನಲ್ಲಿ ತನ್ಮಯ್ ಹೈ ವೋಲ್ಟೇಜ್ ಕಂಬಿ ಬಿದ್ದಿದ್ದ ಕಂಬದ ಸಮೀಪ ಆಟವಾಡುತ್ತಿದ್ದ. ಇಂಡಿಯನ್ ಗ್ಯಾಸ್ ಸರ್ವೀಸ್ ನೀಡಲು ಧನಂಜಯ್ ತೆರಳಿದ್ದರು.

ಈ ವೇಳೆ ತಂತಿ ಸರಿ ಪಡಿಸಲೆಂದು ಹೋದ ಧನಂಜಯ್‌ಗೆ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯವಾಗಿದೆ. ಇದೇ ವೇಳೆ ನಾಲ್ಕು ವರ್ಷದ ಕಂದಮ್ಮ ತನ್ಮಯ್‌ಗೂ ವಿದ್ಯುತ್ ತಗುಲಿ ಗಾಯಗೊಂಡಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ವಿದ್ಯುತ್ ತಂತಿ ಹೊರಗೆ ಬಿದ್ದಿದ್ದರೂ ಅದನ್ನು ಸರಿಪಡಿಸದ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications