Puneeth Rajkumar: 'ಅಪ್ಪು' ಜನ್ಮದಿನಕ್ಕೆ ಅಭಿಮಾನಿಗಳಲ್ಲಿ ಸಂಭ್ರಮ: ಕಂಠೀರವ ಸ್ಟೇಡಿಯಂ ಮುಂದೆ ಜನವೋ ಜನ
ಬೆಂಗಳೂರು, ಮಾರ್ಚ್ 17: ಮರೆಯದ ಮಾಣಿಕ್ಯ, ಕನ್ನಡದ ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು. ಅಪ್ಪು ಅವರು ಇದ್ದಿದ್ದರೆ ಇಂದು ಮಾರ್ಚ್ 17ರಂದು 50 ನೇ ವರ್ಷ ಜನ್ಮದಿನವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಅವರ ಅಗಲಿಕೆ ನಡುವೆ ಲಕ್ಷಾಂತರ ಅಭಿಮಾನಿಗಳು ಅವರ ಹುಟ್ಟುಹಬ್ಬ ಅಚರಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ಮಾಡಿ ಅಪ್ಪು ಸ್ಮರಿಸಿದ್ದಾರೆ. ಸೋಮವಾರ ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಚಿಕ್ಕವರು-ದೊಡ್ಡವರು ಎನ್ನದೇ ಮಹಿಳೆಯರು, ಯುವಕರು ಸೇರಿದಂತೆ ಅಪ್ಪು ಇಷ್ಟಪಡುವ ಸಾವಿರ ಸಾವಿರ ಜನರು ಇಂದು ಅಪ್ಪು ಅವರ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ ಕಂಠೀರವ ಕ್ರೀಡಾಂಗಣದ ಮುಂದೆ ಅಭಿಮಾನಿಗಳ ಗುಂಪು ಜಮಾಯಿಸಿತು. ನಗರದ ರಿಂಗ್ ರಸ್ತೆಯಿಂದ ಅಪ್ಪು ಸಮಾಧಿವರೆಗೆ ಬಹುದೂರದವರೆಗೂ ಸರತಿ ಸಾಲಿನಲ್ಲಿ ಅಭಿಮಾನಿಗಳು ನಿಂತಿದ್ದು ಕಂಡು ಬಂತು. ಎಲ್ಲರು ಕೈಯಲ್ಲಿ ರೋಜ್ ಹಿಡಿದು ಅಪ್ಪು ಸಮಾಧಿಗೆ ಅರ್ಪಿಸಿದರು. ಅಪ್ಪುನನ್ನು ದೇವರೆಂದು ಕರೆಯುವ ಅವರ ಅಭಿಮಾನಿಗಳು ಸಮಾಧಿ ದರ್ಶನ ಪಡೆದರು.

ಕುಟುಂಬಸ್ಥರಿಂದ ಸಮಾಧಿಗೆ ಭೇಟಿ, ಪೂಜೆ-ಭಾವುಕ
ಅಪ್ಪು ಜನ್ಮದಿನ ಪ್ರಯುಕ್ತ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಯುವ ಹಾಗೂ ವಿನಯ್ ರಾಜ್ ಕುಮಾರ್ ಅವರು ಸೇರಿದಂತೆ ಇಡೀ ಕುಟುಂಬಸ್ಥರು ಬೆಳಗ್ಗೆಯೇ ಅಪ್ಪು ಸಮಾಧಿಗೆ ಭೇಟಿ ನೀಡಿದರು. ಪೂಜೆ ಸಲ್ಲಿಸಿ ನಮಿಸಿದರು. ಅಪ್ಪು ನೆನೆದು ಭಾವುಕರಾದರು. ಡಾ.ರಾಜ್ ಕುಟುಂಬದ ಜೊತೆಗೆ ಆಪ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಅಭಿಮಾನಿಗಳಿಂದ ರಕ್ತದಾನ, ಅನ್ನದಾನ, ಸಮಾಜಮುಖಿ ಕಾರ್ಯ
ಬೆಂಗಳೂರು ಮಾತ್ರವಲ್ಲದೇ ನಾಡಿನ ಮೂಲೆ ಮೂಲೆಗಳಲ್ಲಿ ಅಪ್ಪು ಅಭಿಮಾನಿಗಳು ರಕ್ತದಾನ, ಅನ್ನದಾನ, ಬಡವರಿಗೆ ಸಹಾಯ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಪ್ಪು ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಅಚರಿಸಿದ್ದಾರೆ. ಇಂತಹ ಕಾರ್ಯಗಳ ಮೂಲಕ ಅಪ್ಪು ಅವರನ್ನು ಜೀವಂತವಾಗಿಸಿದರು. ಕೆಲವರು ಆನ್‌ಲೈನ್‌ನಲ್ಲಿ ಪುನೀತ್ ಫೋಟೋ ಹಂಚಿಕೊಂಡ ಜನ್ಮದಿನ ಶುಭಕೋರಿದ್ದಾರೆ.

ಸ್ಪೂರ್ತಿದಾಯಕ ಅಪ್ಪು ವ್ಯಕ್ತಿತ್ವ, ಗುಣ, ಸಾಧನೆ, ಕಾರ್ಯಗಳು
ಬಾಲನಟನಾಗಿ ಬೆಳ್ಳಿ ಪರದೇ ಪ್ರವೇಶಿಸಿದ ನಟ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಚಿತ್ರದ ಮೂಲಕ ಪರಿಪೂರ್ಣ ಹಿರೋ ಆಗಿ ಕಾಣಸಿಕೊಂಡರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾದಾದರು. ಜಾಹೀರಾತುವಿನಿಂದ ಬಂದ ಹಣ ಅನಾಥರಿಗೆ, ದೀನ ದುರ್ಬಲರಿಗೆ ನೀಡಿದರು. ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳ ಅಭಿವೃದ್ಧಿ, ಶಿಕ್ಷಣಕ್ಕೆ, ಅನಾರೋಗ್ಯಪೀಡಿತರ ಕೈಲಾದಷ್ಟು ಹಣ, ಮತ್ತಿತರ ಸಹಾಯ ಮಾಡಿದರು.
ಕೇವಲ ನಟನಾಗಿ ಮಾತ್ರವಲ್ಲದೇ, ಉತ್ತಮ ಡಾನ್ಸ್, ಸ್ಟಂಟ್ ಮೂಲಕ ಅಭಿಮಾನಿಗಳ ಮನ ಗೆದ್ದರು. ನಿರ್ಮಾಣ ಸಂಸ್ಥೆ ಹುಟ್ಟಿಹಾಕಿ ಹೊಸಬರಿಗೆ, ಉತ್ತಮ ಕಥೆಗಳನ್ನು ಪ್ರೋತ್ಸಾಹಿಸಿದರು. ಸಮಾಜಕ್ಕೆ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಸಮಾಜಕ್ಕೆ, ಯುವಕರಿಗೆ, ಅಷ್ಟೇ ಏಕೆ ಅನೇಕ ಸಹ ಕಲಾವಿದರೂ ಸ್ಪೂರ್ತಿದಾಯಕ ವ್ಯಕ್ತಿತ್ವ ಅವರದ್ದು. ಅವರ ಸರಳ ನಡೆ, ನುಡಿಯಿಂದಲೇ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾರೆ. ಹೀಗಾಗಿಯೇ ಅವರಿಗೆ ವಯಸ್ಸಿನ ಅಂತವರಿಲ್ಲದೇ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅಭಿಮಾನಿ ಬಳಗ ಇದೆ. ಅನೇಕ ಪ್ರಶಸ್ತಿಗಳು ಅಪ್ಪು ಮುಡಿ ಸೇರಿವೆ.
'ಅಪ್ಪು' ಸಿನಿಮಾ ರಿ-ರೀಲಿಸ್: ಬಾಕ್ಸ್ ಆಫೀಸ್ ಉಡಿಸ್
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ನಟಿಸಿದ 'ಅಪ್ಪು' ಸಿನಿಮಾ ಮಾರ್ಚ್ 14ರಂದು ಶುಕ್ರವಾರ ರಿ-ರಿಲೀಸ್ ಮಾಡಲಾಗಿತ್ತು. ಹೊಸ ಸಿನಿಮಾ ತೆರೆಗೆ ಬಂದಷ್ಟು ಖುಷಿಯಿಂದ ರಾಜ್ಯ ಜನರು ಸ್ವಾಗತಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅಪ್ಪು ಕೋಸ್ಟಾರ್, ನಟಿ ರಕ್ಷಿತಾ, ನಟ ವಿನಯ್ ರಾಜ್‌ಕುಮಾರ್, ನಟಿ ರಮ್ಯಾ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕ ಸಿನಿ ಕಲಾವಿದರ ಅಪ್ಪು ಅನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡಿದ್ದಾರೆ. ಥಿಯೇಟರ್ ಕಿತ್ತು ಬರುವಂತೆ ಸಿಳ್ಳೆ, ಸಂಭ್ರಮಾಚರಣೆ ಕಂಡು ಬಂದಿದೆ. ಸಿನಿಮಾ ನೋಡಿ ಹೊರ ಬರುವಾಗ ಮತ್ತೆ ಅಪ್ಪು ನೆನೆದು ಭಾವುಕರಾಗಿದ್ದಾರೆ. ರಿ-ರೀಲಿಸ್ ಆದ ಮೊದಲ ದಿನವೇ 75 ಲಕ್ಷ ಗಳಿಕೆ ಕಂಡಿದೆ.












Click it and Unblock the Notifications