ನಿಮ್ಮ ಗಾಡಿ ಪದೇ ಪದೇ ಪಂಕ್ಚರ್ ಆಗೋದಕ್ಕೆ ಇದೇ ಕಾರಣ..
ಬೆಂಗಳೂರಲ್ಲಿ ಗಾಡಿ ಓಡಿಸೋರಿಗೆ ಈ ಅನುಭವ ಆಗಿರಲೇಬೇಕು. ಬೆಳಿಗ್ಗೆ ಮನೆಯಿಂದ ಹೊರಟಾಗ ಗಾಡಿ ಚೆನ್ನಾಗೇ ಇರುತ್ತೆ. ಆದರೆ ದಿಢೀರನೆ ಗಾಡಿ ಪಂಕ್ಚರ್ ಆಗಿರುತ್ತೆ. ಈ ಪರಿಸ್ಥಿತಿಯಲ್ಲಿ ಏನಪ್ಪಾ ಮಾಡೋದು ಅಂತ ತಲೆಕೆಡಿಸಿಕೊಳ್ಳುವಷ್ಟರಲ್ಲಿ ಹತ್ತಿರದಲ್ಲೇ ಒಂದು ಪಂಕ್ಚರ್ ಶಾಪ್ ಕಣ್ಣಿಗೆ ಬೀಳುತ್ತೆ. ಸದ್ಯ ಅಂಗಡಿ ಇಲ್ಲೇ ಇದೆಯಲ್ಲಾ.. ಅನ್ಕೊಂಡು ಪಂಕ್ಚರ್ ಹಾಕಿ ಗಾಡಿ ತಗೊಂಡು ಹೋಗಿರುತ್ತೀರ.
ಇವತ್ತು ಬೆಳಿಗ್ಗೆ ಎದ್ದ ಘಳಿಗೆ ಸರಿಯಿಲ್ಲ. ಅದಕ್ಕೆ ಗಾಡಿ ಅರ್ಧದಲ್ಲಿ ಈ ರೀತಿ ಕೈ ಕೊಟ್ಟಿದೆ ಅನ್ಕೊಂಡು ಸುಮ್ಮನಾಗಿರಬಹುದು. ಆದರೆ, ನಿಮಗೇ ಗೊತ್ತಿಲ್ಲದಂತೆ ನೀವೊಂದು ಜಾಲದಲ್ಲಿ ಸಿಲುಕಿಕೊಂಡಿರುತ್ತೀರ. ಅದೇನು ಅಂದ್ರೆ, ಗಾಡಿ ಸುಮ್ ಸುಮ್ನೆ ಪಂಕ್ಚರ್ ಆಗಿರೋಲ್ಲ. ಯಾರೋ ಮಾಡಿದ ಪ್ಲ್ಯಾನ್‌ನಿಂದ ನಿಮ್ಮ ಗಾಡಿ ಪಂಕ್ಚರ್ ಆಗಿರುತ್ತೆ. ಇದೊಂದು ದೊಡ್ಡ ಜಾಲ ಎಂದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಬೆಂಗಳೂರಿನಲ್ಲಿ ಈ ಪಂಕ್ಚರ್ ಮಾಫಿಯಾ ತುಂಬಾ ವರ್ಷಗಳಿಂದಲೂ ಆಕ್ಟೀವ್ ಆಗಿದೆ. ಈಗಲೂ ಸಿಲಿಕಾನ್ ಸಿಟಿಯ ಹಲವೆಡೆ ಇದೇ ಕಥೆ ಇದೆ. ಏನೋ ಟೈರ್‌ನಲ್ಲಿ ಸಮಸ್ಯೆಯಾಗಿ ಪಂಕ್ಚರ್ ಆಗಿದೆ ಅನ್ಕೊಂಡ್ರೆ ಅದು ನಿಮ್ಮ ಮುಟ್ಟಾಳತನ. ಹಣ ಇದು ಹಣ ಮಾಡಲೆಂದೇ ಹುಟ್ಟಿಕೊಂಡಿರೋ ದಂಧೆ.
ಏನಿದು ಪಂಕ್ಚರ್ ಮಾಫಿಯಾ?: ವಾಹನಗಳು ಹೆಚ್ಚಾಗಿ ಸಂಚರಿಸುವ ರಸ್ತೆಗಳಲ್ಲಿ ಮೊಳೆಗಳನ್ನು ಬಿಸಾಡಿ ಹೋಗುವುದು. ಈ ಸಣ್ಣ ಮೊಳೆಗಳು ಟೈರ್‌ಗಳಿಗೆ ಸಿಲುಕಿ ದಿಢೀರ್ ಪಂಕ್ಚರ್ ಆಗಿಬಿಡುತ್ತವೆ. ಹತ್ತಿರದಲ್ಲೇ ಇರುವ ಪಂಕ್ಚರ್ ಅಂಗಡಿಯ ನಿಮ್ಮ ಬರುವಿಕೆಯಾಗಿ ಕಾಯುತ್ತಿರುತ್ತಾನೆ. ನೀವು ಹತ್ತಿರದಲ್ಲೇ ಅಂಗಡಿ ಸಿಕ್ಕಿತು ಎಂದು ನಿಟ್ಟಿಸಿರು ಬಿಟ್ಟು, ಪಂಕ್ಚರ್ ಹಾಕಿಸಿಕೊಂಡು ಮುಂದಕ್ಕೆ ಹೊರಟು ಹೋಗುತ್ತೀರಿ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕೆಲ ಪಂಕ್ಚರ್ ಅಂಗಡಿಯವರೇ ಈ ಕೃತ್ಯ ಎಸಗುತ್ತಿದ್ದಾರಂತೆ.
ಕಳೆದ ವರ್ಷಗಳಿಂದಲೂ ಈ ಮಾಫಿಯಾ ಬೆಂಗಳೂರಿನ ಹಲವೆಡೆ ಇದೆ. ಟ್ರಾಫಿಕ್ ಪೊಲೀಸರು ಈ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಂಡಿದ್ದರು. ಅನುಮಾನಾಸ್ಪದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಈ ಮಾಫಿಯಾ ಸೈಲೆಂಟ್ ಆಗಿತ್ತು. ಇತ್ತೀಚೆಗೆ ಇದು ಮತ್ತೆ ಹುಟ್ಟಿಕೊಂಡಿದೆ. ಗಾಡಿಗಳು ಎಲ್ಲೆಂದರಲ್ಲಿ ಪಂಕ್ಚರ್ ಆಗುತ್ತಿವೆ ಎಂದು ವರದಿಯಾಗಿದೆ.

ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ಅಂಡರ್‌ಪಾಸ್, ಫ್ಲೈಓವರ್‌ಗಳಲ್ಲಿ ಹೆಚ್ಚಾಗಿ ಸಂಚರಿಸುವ ವಾಹನಗಳು ದಿಢೀರನೆ ಪಂಕ್ಚರ್ ಆಗಿ ನಿಲ್ಲುತ್ತಿವೆ. ಇದಕ್ಕೆ ಪಂಕ್ಚರ್ ಮಾಫಿಯಾನೇ ಕಾರಣ ಎಂದು ಹೇಳಲಾಗುತ್ತಿದೆ. ಜಾಲಹಳ್ಳಿಯ ಕುವೆಂಪು ಸರ್ಕಲ್ ಬಳಿ ರಸ್ತೆಯಲ್ಲಿ ಇತ್ತೀಚೆಗೆ ಮೊಳೆಗಳು ಬಿದ್ದಿದ್ದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು. ರಾತ್ರೋರಾತ್ರಿ ಭಾರಿ ಪ್ರಮಾಣದ ಮೊಳೆಗಳನ್ನು ಕಿಡಿಗೇಡಿಗಳು ರಸ್ತೆಯಲ್ಲಿ ಎಸೆದು ಹೋಗಿದ್ದರು.
ಹೆಚ್ಚಿನ ವಾಹನಗಳು ಪಂಕ್ಚರ್ ಆಗಿದ್ದರಿಂದ ಪೊಲೀಸರು ಸ್ಥಳ ಪರಿಶೀಲಿಸಿ, ಮೊಳೆಗಳನ್ನು ಸಂಗ್ರಹಿಸಿದ್ದರು. ಇದೇ ರೀತಿ ನಗರದ ಬೇರೆ ಭಾಗಗಳಲ್ಲಿಯೂ ನಡೆಯುತ್ತಿದ್ದು, ಹೊಸ ಟೈರ್ ಕೂಡ ಪಂಕ್ಚರ್ ಆಗಲು ಶುರುವಾಗಿದೆ. ಇದರ ಹಿಂದೆ ಪಂಕ್ಚರ್ ಅಂಗಡಿಯವರದ್ದೇ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಬೆಂಗಳೂರಿನ ಯಲಹಂಕ, ನಾಗವಾರ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ರಿಂಗ್ ರೋಡ್‌ಗಳಲ್ಲಿ ವಾಹನಗಳು ದಿಢೀರನೆ ಪಂಕ್ಚರ್ ಆಗಿ ನಿಲ್ಲುತ್ತಿವೆ. ಇದರಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿದೆ. ಹೆಬ್ಬಾಳ, ಡಿ.ಜೆ.ಹಳ್ಳಿ, ಮೆಜೆಸ್ಟಿಕ್, ನಾಗವಾರ, ಕೆ.ಜಿ.ಹಳ್ಳಿ, ಕಾಟನ್‌ಪೇಟೆ, ಚಾಮರಾಜಪೇಟೆ, ಹೆಸರಘಟ್ಟ ರಸ್ತೆ, ಸುಂಕದಕಟ್ಟೆ, ಬಾಗಲೂರು ಭಾಗದಲ್ಲಿ ಈ ಪಂಕ್ಚರ್ ಮಾಫಿಯಾ ಜೋರಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ.
ಈ ಮಾಫಿಯಾದಿಂದ ಬಿಎಂಟಿಸಿ ಬಸ್‌ಗಳು ಕೂಡ ಪಂಕ್ಚರ್ ಆಗಿವೆ ಎಂದು ಹೇಳಲಾಗಿದ್ದು, ಕಳೆದ ಆರು ತಿಂಗಳಲ್ಲಿ 400ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಪಂಕ್ಚರ್ ಆಗಿವೆ. ಇದಕ್ಕೂ ಪಂಕ್ಚರ್ ಮಾಫಿಯಾ ಕಾರಣವಿರಬಹುದಾ ಎಂಬ ಪ್ರಶ್ನೆ ಉದ್ಭವಿಸಿದೆ.












Click it and Unblock the Notifications