ಪಿಯು ವಿದ್ಯಾರ್ಥಿನಿ ಗೌತಮಿ ಕೊಲೆ ಮಾಡಿದ್ದ ಮಹೇಶ್ ಬಂಧನ
ಬೆಂಗಳೂರು, ಏ.1 : ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಾಡುಗೋಡಿ ಪೊಲೀಸರು ಪ್ರಗತಿ ಪಿಯು ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಗೌತಮಿ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಬಂಧಿತ ಮಹೇಶ್ ವಿಚಾರಣೆ ನಡೆಯುತ್ತಿದೆ.
ಗುಂಡಿನ ದಾಳಿ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕಾಡುಗೋಡಿ ಪೊಲೀಸರು ದಾಳಿ ನಡೆಸಿದ ಅಟೆಂಡರ್ ಮಹೇಶ್‌ನನ್ನು ಬಂಧಿಸಿದ್ದಾರೆ. ಬಿ.ನಾರಾಯಣಪುರದಲ್ಲಿರುವ ಅಕ್ಕನ ಮನೆಯಲ್ಲಿ ಮಹೇಶ್ ಅಡಗಿದ್ದ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. [ಪಿಯು ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ]

ಆರೋಪಿ ಮಹೇಶ್ ಮೊಬೈಲ್ ನಂಬರ್ ಮತ್ತು ಸಂಬಂಧಿಕರ ವಿವರ ಸಂಗ್ರಹಿಸಿದ ಪೊಲೀಸರು ಆ ಸುಳಿವಿನ ಮೇಲೆ ಅಕ್ಕನ ಮನೆಯಲ್ಲಿ ಅಡಗಿದ್ದ ಮಹೇಶ್‌ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಂದೂಕನ್ನು ಆತನಿಂದ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಗತಿ ಪಿಯು ಕಾಲೇಜಿನ ಆವರಣದಲ್ಲಿರುವ ಹಾಸ್ಟೆಲ್‌ಗೆ ಮಹೇಶ್ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಹೋಗಿರುವುದು ಹೇಗೆ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಸ್ಟೆಲ್‌ನ ಮೂರನೇ ಮಹಡಿಯಲ್ಲಿರುವ ಗೌತಮಿ ಕೊಠಡಿಗೆ ತೆರಳಿದ್ದ ಮಹೇಶ್ ಆಕೆ ಮತ್ತು ಗೌತಮಿ ಸ್ನೇಹಿತೆ ಶಿರಿಷಾ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ.
ತಲೆಗೆ ಗುಂಡು ಬಿದಿದ್ದ ಗೌತಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಗೌತಮಿ ಜೊತೆ ರೂಮಿನಲ್ಲಿದ್ದ ಶಿರಿಷಾ ಸಹ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಆಕೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications