ಇಂಟರ್ನೆಟ್ ಇಲ್ಲದಿದ್ದರೂ ಕಲಿಕೆಗೆ ನೆರವಾಗುವ ನೂತನ ಪ್ರೋಲಾಸ್ಕೂಲ್ ಆ್ಯಪ್ ಬಿಡುಗಡೆ
ಬೆಂಗಳೂರು ಜುಲೈ 31: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳು ಆಗುತ್ತಿವೆ. ಹಲವಾರು ಅಪ್ಲಿಕೇಷನ್ ರಚಿಸಲಾಗುತ್ತಿದೆ. ಒಡೆದು ಹೋಗಿರುವ ಮನಸ್ಸುಗಳನ್ನು ಸೇರಿಸುವಂತಹ ಒಂದೆರಡು ಆ್ಯಪ್‌ಗಳು ಬಂದರೆ ಒಡೆದು ಹೋಗುತ್ತಿರುವ ಬದುಕನ್ನ ಸುಲಭವಾಗಿ ಸರಿಪಡಿಸಬಹುದಾಗಿತ್ತು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಿಜಿಟಲ್ ಕಲಿಕೆಯ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಪ್ರೋಲಾ ಟೆಕ್‌ನ ಪ್ರೋಲಾಸ್ಕೂಲ್ ಆ್ಯಪ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಗುರುವಿನ ಪಾದದಲ್ಲಿ ಕುಳಿತು ಜ್ಞಾನಾರ್ಜನೆ ಪಡೆದುಕೊಳ್ಳಲಾಗುತ್ತಿತ್ತು. ಆಧುನಿಕ ಆವಿಷ್ಕಾರಗಳು ಹಾಗೂ ಕೊರೋನಾ ಸಾಂಕ್ರಾಮಿಕ ನಮ್ಮೆದರು ತೆರೆದಿಟ್ಟ ಅನಿವಾರ್ಯತೆಯಿಂದ ನಾವಿದ್ದಲ್ಲಿಯೇ ವಿಶ್ವದ ಮೂಲೆ ಮೂಲೆಗಳಿಂದ ಜ್ಞಾನ ಹರಿದುಬರುತ್ತಿದೆ. ಅಂತಹ ಜ್ಞಾನದ ರಾಶಿಯನ್ನು ಉಪಯೋಗಿಸಿಕೊಳ್ಳುವಂತಹ ನೂತನ ವೇದಿಕೆಯಾಗಿ ಪ್ರೋಲಾಟೆಕ್ ಪ್ರೊಲಾಸ್ಕೂಲ್ ಆ್ಯಪ್ ಸಿದ್ದಗೊಳಿಸಿದೆ ಎಂದರು.
ಪ್ರೋಲಾಸ್ಕೂಲ್ ಅಂತರ್ಜಾಲದ ಸಂಪರ್ಕವಿಲ್ಲದೆಯೂ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಮುಂದುವರೆಸಲು ಅವಕಾಶ ನೀಡುವ ಹಾಗೂ ಸಂಸ್ಥೆಗಳಿಗೆ ಮತ್ತು ಕೋಚಿಂಗ್ ಸೆಂಟರ್‌ಗಳಿಗೆ ಅಗತ್ಯವಿರುವ ಡಿಜಿಟಲ್ ವೇದಿಕೆಯನ್ನು ಒದಗಿಸುವ ದೇಶದ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಒಂದಾಗಿದೆ. ಅಲ್ಲದೇ, ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಲು ಈ ಆ್ಯಪ್ ಬಳಸಿಕೊಳ್ಳಬಹುದಾಗಿದೆ. ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಅಂತರ್ಜಾಲದ ಸಮಸ್ಯೆ ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳು ಆಫ್‌ಲೈನ್ ಮೂಲಕ ಕಲಿಕೆ ಮುಂದುವರೆಸಲು ಅನುವು ಮಾಡುವುದು ಪ್ರೋಲಾಸ್ಕೂಲ್‌ನ ಪ್ರಮುಖ ಉದ್ದೇಶ ಎಂದು ತಿಳಿದು ಸಂತಸವಾಯಿತು ಎಂದರು.

ರಿಯಲ್ ಟೈಮ್ ಮಾಕ್ ಟೆಸ್ಟ್‌ಗಳನ್ನು ತಗೆದುಕೊಳ್ಳುವ, ಫಲಿತಾಂಶವನ್ನು ಪ್ರಕಟಿಸುವ ಹಾಗೂ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶಕ್ಕೂ ಇದನ್ನು ಬಳಸಿಕೊಳ್ಳುವಂತೆ ರಚಿಸಲಾಗಿರುವುದು ವಿಶೇಷ ಎಂದರು.
ಮನಸ್ಸುಗಳನ್ನು ಒಗ್ಗೂಡಿಸುವ ಆಪ್‌ಗಳು ಇರಬೇಕಿತ್ತು
ಕೊರೋನಾ ಸಂಕಷ್ಟದ ಕಾಲದಲ್ಲಿ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನ ಇಲ್ಲದೇ ಇದ್ದಿದ್ದರೆ ಬಹಳ ಕಷ್ಟವಾಗುತ್ತಿತ್ತು. ವಿಜ್ಞಾನ ಹಾಗೂ ತಂತ್ರಜ್ಞಾನ ನಮಗೆ ಬಹಳ ಅಗತ್ಯ. ಆದರೆ, ಅದನ್ನು ಮಾನವನ ಉನ್ನತಿಗೆ ಬಳಸಿಕೊಳ್ಳುವ ಜ್ಞಾನವೂ ಅಗತ್ಯ. ಪ್ರತಿನಿತ್ಯ ಸಾವಿರಾರು ಆ್ಯಪ್ ಗಳು ಬರುತ್ತವೆ. ಒಡೆದು ಹೋಗಿರುವ ಮನಸ್ಸುಗಳನ್ನು ಒಗ್ಗೂಡಿಸುವಂತಹ ಒಂದೆರಡು ಆ್ಯಪ್‌ಗಳು ಇದ್ದಿದ್ದರೆ ಬಹಳ ಚೆನ್ನಾಗಿತ್ತು. ಇದರಿಂದ ಒಡೆದು ಹೋಗುತ್ತಿರುವ ಬಹಳಷ್ಟು ಬದುಕುಗಳನ್ನು ಸರಿಪಡಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಮಕ್ಕಳು ಸರಳವಾಗಿ ಉಪಯೋಗಿಸಬಹುದಾದ ಕಲಿಕಾ ತಂತ್ರಜ್ಞಾನಗಳು ಹೆಚ್ಚಾಗಬೇಕು. ನಮ್ಮ ಮಾನಸಿಕ ವಿಕಾಸಕ್ಕೆ ಧಕ್ಕೆ ಬರದ ಹಾಗೆ ನೂತನ ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕಾಗಿದೆ. ನಮ್ಮ ಬದುಕಿನಲ್ಲಿ ಸಮಸ್ಯೆ ಬಂದಾಗ ಯಂತ್ರಗಳು ಉಪಯೋಗಕ್ಕೆ ಬರುವುದಿಲ್ಲ. ಬದುಕಿಗೆ ಬಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಪ್ರಜ್ಞೆಯನ್ನು ಎತ್ತರಿಸುವ ಆಧ್ಯಾತ್ಮಿಕಕ್ಕೆ ಇರುವ ಶಕ್ತಿ ವಿಜ್ಞಾನಕ್ಕೆ ಬಂದರೆ ಸಂತಸ ಎಂದರು.












Click it and Unblock the Notifications