'ವಿದ್ವತ್ ಏನು, ಬಾರ್‌ಗೆ ಹಾಲು ಕುಡಿಯಲು ಹೋಗಿದ್ನಾ?'
ಬೆಂಗಳೂರು, ಫೆಬ್ರವರಿ 27: ವಿದ್ವತ್ ವಿರುದ್ಧ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ನಲಪಾಡ್ ಹೊರತಾಗಿ ಉಳಿದ ಆರೋಪಿಗಳ ವಕೀಲ ಎಸ್.ಬಾಲನ್ ಇಂದು ಸೆಷನ್ಸ್ ನ್ಯಾಯಾಲಯದಲ್ಲಿ ಭರ್ಜರಿಯಾಗಿ ವಾದ ಮಂಡಿಸಿದರು.
ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಅವರು ಆಸ್ಪತ್ರೆ ದಾಖಲೆಗಳು, ಎಫ್‌ಐಆರ್‌ನಲ್ಲಿ ಇರುವ ದೋಷಗಳು ಮತ್ತು ಇತರೆ ಆರೋಪಿಗಳ ಸ್ಥಿತಿ ಮುಂತಾದ ವಿಷಯಗಳನ್ನು ಕೋರ್ಟ್‌ನ ಗಮನಕ್ಕೆ ತಂದು ಸಶಕ್ತವಾಗಿ ವಾದ ಮಂಡಿಸಿದರು.
'ಇದೊಂದು ಇಬ್ಬರು ಬಿಸಿ ರಕ್ತದ ಹುಡುಗರ ನಡುವಿನ ಜಗಳವಷ್ಟೆ' ಎಂದು ಕೋರ್ಟ್‌ನಲ್ಲಿ ಹೇಳಿದ ಅವರು ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುವಾಗಲೂ ಅದೇ ಮಾತನ್ನಾಡಿದರು.

'ವಿದ್ವತ್ ಏನು ಹಾಲು ಕುಡಿಯಲು ಆ ಐಶಾರಾಮಿ ಬಾರ್‌ಗೆ ಹೋಗಿದ್ದನಾ' ಎಂದು ಪ್ರಶ್ನಿಸಿದ ಬಾಲನ್ ಅವರು ಅವನೂ ಅಲ್ಲಿಗೆ ಕುಡಿಯಲೆಂದೇ ಹೋಗಿದ್ದ, ಹಾಲು ಕುಡಿಯುವಂತಿದ್ದರೆ ಬಾರ್‌ಗೆ ಬರುತ್ತಿರಲಿಲ್ಲ ಎಂದ ಅವರು ಕುಡಿದ ನಂತರ ಇಬ್ಬರು ಬಿಸಿ ರಕ್ತದ ಯುವಕರ ನಡುವಿನ ಎರಡು ನಿಮಿಷ ನಡೆದಿರುವ ಗಲಾಟೆ ಅಷ್ಟೆ ಎಂದಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಬಾಬು ಎಂಬ ನಮ್ಮ ಕಕ್ಷೀದಾರ ಸಹ ವಿದ್ವತ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ ಆದರೆ ಅದನ್ನು ಪೊಲೀಸರು ಬೇಕೆಂದೆ ನಿರ್ಲಕ್ಷ ಮಾಡಿದ್ದಾರೆ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ 307 ಕೇಸು ದಾಖಲಿಸಿದ್ದು, ಆರೋಪಿಗಳಿಗೆಲ್ಲಾ ಜಾಮೀನು ದೊರಕುವ ಸಂಭವ ಇದೆ ಎಂದು ಅವರು ಹೇಳಿದರು.












Click it and Unblock the Notifications