ಕ್ವಾರಂಟೈನ್‌ಗೆ ಹೆದರಿ ಆಸ್ಪತ್ರೆ ಲಾಕ್ ಮಾಡಿಕೊಂಡ ವೈದ್ಯರು!
ಬೆಂಗಳೂರು, ಏಪ್ರಿಲ್ 23: ಕೊರೊನಾ ಪಾಸಿಟಿವ್ ಬಂದ ರೋಗಿಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಕ್ವಾರಂಟೈನ್ ಆಗಲು ನಿರಾಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿನ್ನೆ ಬೆಂಗಳೂರಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬ ಬೊಮ್ಮನಹಳ್ಳಿ ಬಳಿಯ ಹೊಂಗಸಂದ್ರದಲ್ಲಿ ವಾಸವಾಗಿದ್ದರು.
ಜ್ವರ ಮತ್ತು ಕೆಮ್ಮು ಕಂಡು ಬಂದಿದ್ದರಿಂದ ಅವರು, ಬೊಮ್ಮನಹಳ್ಳಿಯ ವೇಣು ಆಸ್ಪತ್ರೆಯಲ್ಲಿ ಕಳೆದ ವಾರ ಚಿಕಿತ್ಸೆ ಪಡೆದುಕೊಂಡು, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನಾ ತಪಾಸಣೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

ರೋಗಿಯ ಟ್ರಾವೆಲ್ ಹಿಸ್ಟರಿ ಅನುಸಾರ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ವೇಣು ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲು ಹೋದಾಗ ಅಲ್ಲಿನ ವೈದ್ಯರು, ನರ್ಸ್ ಗಳು ಕ್ವಾರಂಟೈನ್ ಆಗುವುದಿಲ್ಲ ಎಂದು ಆಸ್ಪತ್ರೆ ಬಾಗಿಲು ಬಂದ್ ಮಾಡಿ ಒಳಗೆ ಲಾಕ್ ಮಾಡಿಕೊಂಡಿದ್ದರು. ಬಳಿಕ ಬಿಬಿಎಂಪಿ ಅಧಿಕಾರಿಗಳು ಬಾಗಿಲು ಮುರಿದು ಬಲವಂತವಾಗಿ ಆಸ್ಪತ್ರೆಯ 18 ಜನರನ್ನು ಇದೀಗ ಕ್ವಾರಂಟೈನ್ ಗೆ ಕಳುಹಿಸಿದ್ದಾರೆ.
ಇತ್ತ ಕಾರ್ಮಿಕನ ಸಂಪರ್ಕಕ್ಕೆ ಬಂದ 9 ಜನರಿಗೆ ಕೊರೊನಾ ಸೋಂಕು ಇರುವುದು ದೃಡವಾಗಿದೆ. ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವೇಣು ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳ ತಪಾಸಣೆ ನಡೆಸಲಾಗುತ್ತೆ. 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಬೊಮ್ಮನಹಳ್ಳಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇವರೆಲ್ಲ ಕಾರ್ಮಿಕರಾಗಿದ್ದು, ಈ ಕಾರ್ಮಿಕರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಗೆ ಕಳುಹಿಸುವುದು ಆರೋಗ್ಯಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.












Click it and Unblock the Notifications