ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ ರಾಜೇಶ್ ನಿಧನ; ಕಂಬನಿ ಮಿಡಿದ ಕಲಾವಿದರು, ರಾಜಕೀಯ ನಾಯಕರು

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಶನಿವಾರ (ಫೆ.19) ಮುಂಜಾನೆ ನಿಧನರಾಗಿದ್ದಾರೆ. ರಾಜೇಶ್ ಅಂತ್ಯಕ್ರಿಯೆಯ ಕುರಿತು ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ಈ ದಿನ ದುಃಖಕರವಾದ ದಿನ ಎಂದು ಮಾತನಾಡಿದ ಅರ್ಜುನ್ ಸರ್ಜಾ, "ಕನ್ನಡ ಚಿತ್ರರಂಗದಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಇದ್ದವರು ರಾಜೇಶ್. ಡಾ.ರಾಜ್‌ಕುಮಾರ್​ರವರ ಪಂಕ್ತಿಯವರು. ಮನಸ್ಸಿಗೆ ಕಷ್ಟವಾಗುತ್ತಿದೆ," ಎಂದು ಹೇಳಿದ್ದಾರೆ.

Kannada Actor Rajesh : ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ 'ಕಲಾತಪಸ್ವಿ' ರಾಜೇಶ್ ನಿಧನKannada Actor Rajesh : ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ 'ಕಲಾತಪಸ್ವಿ' ರಾಜೇಶ್ ನಿಧನ

ರಾಜೇಶ್ ಅವರ ಕೊನೆಯ ದಿನಗಳ ಕುರಿತು ಮಾಹಿತಿ ನೀಡಿದ ಅರ್ಜುನ್ ಸರ್ಜಾ, "10 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊದಲಿಗೆ ಕೋವಿಡ್ ಆಮೇಲೆ ಸಿಕೆಡಿ ಸಮಸ್ಯೆ ಆಗಿತ್ತು. ತುಂಬಾ ಸುಸ್ತು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಹಳ ಪ್ರಯತ್ನಪಟ್ಟರೂ, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಶನಿವಾರ ಮುಂಜಾನೆ 2.20ಕ್ಕೆ ಮೃತಪಟ್ಟರು," ಎಂದು ತಿಳಿಸಿದರು.

Political Leaders and Artists Express Condolence to Senior Actor Rajesh Death

ವಿದ್ಯಾರಣ್ಯಪುರದ ಅವರ ನಿವಾಸದಲ್ಲಿ ಪೂಜೆ ನಡೆಯಲಿದ್ದು, ಶನಿವಾರ ಬೆಳಿಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಮಧ್ಯಾಹ್ನ 3.30ಕ್ಕೆ ಮೇಡಿ ಅಗ್ರಹಾರ ಲಕ್ಷ್ಮೀಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು, ಅಭಿಮಾನಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆಯಬಹುದು ಎಂದು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ನಟ ರಾಜೇಶ್ ನಿಧನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಕಲಾವಿದರು, ರಾಜಕೀಯ ನಾಯಕರು ಹಾಗೂ ಕಂಬನಿ ಮಿಡಿದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ನಟರಾದ ರಾಜೇಶ್ ಅವರು ನಿಧನರಾದ ವಿಷಯ ತುಂಬಾ ನೋವುಂಟುಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೋಕ ವ್ಯಕ್ತಪಡಿಸಿದ್ದಾರೆ.

Political Leaders and Artists Express Condolence to Senior Actor Rajesh Death

ಸದ್ಗತಿ ಕೋರಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರಾಜೇಶ್‌ ಅವರು ವಿಧಿವಶರಾದ ಸುದ್ದಿ ಅತೀವ ದುಃಖವನ್ನುಂಟುಮಾಡಿದೆ. ರಂಗಭೂಮಿ ಹಿನ್ನೆಲೆಯಿಂದ ಬೆಳ್ಳಿತೆರೆ ಪ್ರವೇಶಿಸಿದ್ದ ರಾಜೇಶ್ ಅವರ ನಿಧನದಿಂದ ಚಿತ್ರರಂಗ ಹಿರಿಯ ನಟನನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು, ಅವರು ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಶೋಕ ಸಂದೇಶ
ಕನ್ನಡದ ಪ್ರತಿಭೆ ರಾಜೇಶ್ ಅವರ ನಿಧನಕ್ಕೆ ವಿರೋಧ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಹಿರಿಯ ನಟ ರಾಜೇಶ್ ಅವರ ಅಗಲಿಕೆಯಿಂದಾಗಿ ಕನ್ನಡ ಚಿತ್ರರಂಗ ಅದ್ಭುತ ಕಲಾವಿದರೊಬ್ಬರನ್ನು ಕಳೆದುಕೊಂಡಿದೆ. ನಾಯಕ ನಟರಾಗಿ ಮಾತ್ರವಲ್ಲದೆ ಪೋಷಕ ನಟರಾಗಿಯೂ ಬೆಳ್ಳಿ ತೆರೆಯನ್ನು ಬೆಳಗಿದ ರಾಜೇಶ್ ನನಗೆ ಚಿರಪರಿಚಿತರು. ಹಲವಾರು ಸಂದರ್ಭಗಳಲ್ಲಿ ನಾವು ಭೇಟಿಯಾಗಿದ್ದೆವು ಎಂದು ತಿಳಿಸಿದ್ದಾರೆ.

ರಂಗಭೂಮಿ ಮೂಲಕ ಕಲಾ ಜಗತ್ತಿಗೆ ಪ್ರವೇಶ ಪಡೆದ ಮುನಿಚೌಡಪ್ಪ ಅವರಿಗೆ ರಂಗಭೂಮಿ ಕೊಟ್ಟ ಹೆಸರು ವಿದ್ಯಾಸಾಗರ್. ರಂಗಭೂಮಿ ಮೂಲಕವೇ ಬೆಳ್ಳೆ ತೆರೆಗೆ ಬಂದು ರಾಜೇಶ್ ಆಗಿ ಖ್ಯಾತಿ ಪಡೆದರು. ನಾಯಕ ನಟರಾಗಿ ಮತ್ತು ಪೋಷಕ ಪಾತ್ರಗಳಲ್ಲೂ ಮಿಂಚಿ ಮೂರು ತಲೆ ಮಾರಿನ ಕನ್ನಡಿಗರಿಗೆ ಪರಿಚಿತರಾಗಿದ್ದರು. ಒಬ್ಬೊಬ್ಬರಾಗಿ ಹಿರಿಯ ಕಲಾವಿದರನ್ನು ನಮ್ಮ ಕಲಾ ಜಗತ್ತು ಕಳೆದುಕೊಳ್ಳುತ್ತಿರುವುದು ಬಹಳ ದುಃಖದ ಸಂಗತಿ.

Political Leaders and Artists Express Condolence to Senior Actor Rajesh Death

ರಾಜೇಶ್ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅಭಿಮಾನಿಗಳಿಗೆ, ಕುಟುಂಬಕ್ಕೆ ಮತ್ತು ಬಂಧು ಮಿತ್ರರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ
ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದು, ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಅಬಕಾರಿ ಸಚಿವ ಕೆ. ಗೋಪಾಲಯ್ಯ ಕಂಬನಿ
ಹಿರಿಯ ಕನ್ನಡ ಚಿತ್ರನಟ, ಕಲಾ ತಪಸ್ವಿ ರಾಜೇಶ್ ಅವರ ನಿಧನಕ್ಕೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಕಂಬನಿ ಮಿಡಿದಿದ್ದಾರೆ. ವರನಟ ಡಾ.ರಾಜ್‌ಕುಮಾರ್ ಸಮಕಾಲೀನರಾದ ರಾಜೇಶ್, ಕನ್ನಡ ಚಿತ್ರಗಳಲ್ಲಿ ನಾಯಕನಟರಾಗಿ, ಪೋಷಕ ನಟರಾಗಿ ಕನ್ನಡಿಗರ ಮನದಲ್ಲಿ ನೆಲೆಸಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗ‌ಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸಚಿವರು ತಮ್ಮ‌ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ನಾಯಕ ನಟರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್‌ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ರಾಜೇಶ್ ಅವರ ನಿಧನದಿಂದ ಚಿತ್ರರಂಗ ಹಿರಿಯ ನಟನನ್ನು ಕಳೆದುಕೊಂಡು ಬಡವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ, ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾರ್ಥಿಸಿದ್ದಾರೆ.

Recommended Video

ಹಲವು‌ ಕುಟುಂಬಗಳ ಬದುಕನ್ನು‌ ಬೀದಿಗೆ‌ ತಂದ ಹಿಜಾಬ್‌ vs ಕೇಸರಿ‌ ಶಾಲು‌ ಗಲಾಟೆ | Oneindia Kannada

ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ
ಕನ್ನಡ ಚಿತ್ರರಂಗದ ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ರಾಜೇಶ್ ಅವರು ನಿಧನರಾದ ಸುದ್ದಿ ತೀವ್ರ ಆಘಾತ ತಂದಿದೆ. 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ರಾಜೇಶ್ ಅವರ ನಿಧನ, ಕನ್ನಡ ಕಲಾರಂಗಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.

English summary
Karnataka Political Leaders and Artists express Condolence to senior actor Rajesh death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X