ಕುಖ್ಯಾತ ಕುಣಿಗಲ್ ಗಿರಿ ಬಗ್ಗೆ ಒಂದಷ್ಟು ವಿವರಗಳು
ಬೆಂಗಳೂರು, ಜೂ.18: ರಾಜಧಾನಿಯನ್ನು ನಡುಗಿಸಿ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಕುಖ್ಯಾತ ದರೋಡೆಕೋರ ಕುಣಿಗಲ್ ಗಿರಿ ಸೇರಿದಂತೆ ಆತನ ಸಹಚರರು ದೋಚಿದ್ದ ಸುಮಾರು 1.50 ಕೋಟಿ ರೂ. ಮೌಲ್ಯದ ಕಳವು ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ಗಿರಿ ಮತ್ತು ಆತನ ಸಹಚರರನ್ನು ಮೇ. 19ರಂದು ಬೆಂಗಳೂರು ಮತ್ತು ಆಂಧ್ರಪ್ರದೇಶ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಈ ಸಂದರ್ಭದಲ್ಲಿ 52 ದರೋಡೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂದು ಹೇಳಲಾಗಿತ್ತು. ಆದರೆ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಒಟ್ಟು 56 ಪ್ರಕರಣದಲ್ಲಿ ಇತನ ತಂಡ ಭಾಗಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್‌ಕರ್ ಹೇಳಿದ್ದಾರೆ.
ಕುಣಿಗಲ್ ಗಿರಿ ಮತ್ತು ಆತನ ಸಹಚರರಿಂದ ದರೋಡೆಗೊಳಗಾಗಿ ಚಿನ್ನಾಭರಣ ಕಳೆದುಕೊಂಡಿದ್ದ ಯುವ ನಟ ಹರ್ಷ ಕುಟುಂಬ ಸೇರಿದಂತೆ ಹಲವರಿಗೆ ಆಭರಣಗಳನ್ನು ಪೊಲೀಸ್ ಆಯುಕ್ತರು ಮಂಗಳವಾರ ಹಿಂದಿರುಗಿಸಿದರು.
ಮುಂದಿನ ಪುಟದಲ್ಲಿ ಕುಣಿಗಲ್ ಗಿರಿ ಯಾರು?ಆತ ಹೇಗೆ ಸಂಘಟನೆ ಬೆಳೆಸಿದ್ದ ಎಂಬುವುದರ ಬಗ್ಗೆ ವಿವರ ಮತ್ತು ಆತನ ಗ್ಯಾಂಗ್‌ನಿಂದ ಪೊಲೀಸರು ವಶ ಪಡಿಸಿಕೊಂಡ ಚಿನ್ನಾಭರಣಗಳ ಚಿತ್ರಗಳನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಕುಣಿಗಲ್ ಗಿರಿ ಯಾರು?
ಕುಣಿಗಲ್ ಗಿರಿ ಉರುಫ್ ಗಿರೀಶ್ ಅಲಿಯಾಸ್ ಮೋದೂರು ಗಿರಿ ಉರುಫ್ ಪ್ರಶಾಂತ್ ರಾಜ್ ಅಲಿಯಾಸ್ ಅಶ್ವತ್ಥ್ ಎಂಬ ಹಲವು ಹೆಸರುಗಳಿಂದ ಇವನನ್ನು ಕರೆಯಲಾಗುತ್ತಿದ್ದು, ಕುಣಿಗಲ್‌ನಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾನೆ.
ವಿದ್ಯಾರ್ಥಿಯಾಗಿದ್ದಾಗಲೇ ಆತ ಹೊಡೆದಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ. 2005ರಲ್ಲಿ ಮಲ್ಲೇಶ್ವರ ವ್ಯಾಪ್ತಿಯಲ್ಲಿ ಮಹಿಳೆ ಬಳಿ ಚಿನ್ನದ ಸರ ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದ. 2008ರಲ್ಲಿ ಅಕ್ರಮ ಮರಳು ದಂಧೆ ಶುರುಮಾಡಿಕೊಂಡವನು ವಿಲಾಸಿ ಜೀವನಕ್ಕೆ ಮಾರು ಹೋಗಿದ್ದ.

ಕಳ್ಳತನದ ಆರಂಭ ಹೇಗೆ?
ಮೊದಲಿಗೆ 3-4 ಜನರ ಗ್ಯಾಂಗ್ ಕಟ್ಟಿಕೊಂಡು ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಪಲ್ಸಾರ್ ಬೈಕ್‌ಗಳನ್ನು ಕಳ್ಳತನ ಮಾಡಿ ಈ ವಾಹನಗಳನ್ನು ಉಪಯೋಗಿಸಿ ಕಳ್ಳತನ ಮತ್ತು ಮನೆ ದರೋಡೆಗಳನ್ನು ಮಾಡುತ್ತಿದ್ದ.
ಆ ಸಮಯದಲ್ಲಿ ಅಂಜನಾನಗರ ನಿವಾಸಿ ಅಶೋಕ ಉರೂಫ್ ಟೆಂಟ್ ಅಶೋಕನಿಂದ ಸುಪಾರಿ ಪಡೆದು ಪಾಯ್ಸನ್ ರಾಮನ ಅಣ್ಣ ಡಾಬ ಸೀನನನ್ನು ಕೊಲೆ ಮಾಡಲು ಸಂಚು ಮಾಡುವ ಸಮಯದಲ್ಲಿ ಸಿ.ಸಿ.ಬಿ ಪೊಲೀಸರ ಬಲೆಗೆ ಬಿದ್ದಿದ್ದ.

ಜೈಲಿನಲ್ಲೇ ಸಂಘಟನೆ:
ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ವೇಳೆ ಅಲ್ಲಿದ್ದ ಆರೋಪಿಗಳೊಂದಿಗೆ ಸ್ನೇಹ ಸಂಪಾದಿಸಿ ಸಂಘಟನೆ ಮಾಡಿಕೊಂಡಿದ್ದ. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ 15 ಜನರ ತಂಡವನ್ನು ಕಟ್ಟಿಕೊಂಡು ಬೆಂಗಳೂರು ನಗರ, ಹಾಸನ, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ ಮುಂತಾದ ಕಡೆ ದರೋಡೆ ಮಾಡಲು ಆರಂಭಿಸಿದ್ದ. ಆರೋಪಿ ಕುಣಿಗಲ್ ಗಿರಿವಿರುದ್ದ ಹಲವಾರು ವಾರೆಂಟ್‍ಗಳಿದ್ದರೂ ಸಹ ನ್ಯಾಯಾಲಯಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಪೊಲೀಸರಿಗೆ ತಲೆ ನೋವಾಗಿದ್ದ ಕುಣಿಗಲ್ ಗಿರಿ:
ಜನವರಿಯಿಂದ ಮೇ ತಿಂಗಳವರೆಗೆ ಬೆಂಗಳೂರು ವಿವಿಧ ಠಾಣಾ ಸರಹದ್ದಿನಲ್ಲಿ ಇವರ ತಂಡ ರಾತ್ರಿ 7 ಗಂಟೆಯಿಂದ 11 ಗಂಟೆಯ ನಡುವೆ ರಸ್ತೆಗಳಲ್ಲಿ ಹೋಗುವ ವ್ಯಕ್ತಿಗಳನ್ನು ಅಡ್ಡಹಾಕಿ ಲಾಂಗ್‍ಗಳಿಂದ ಬೆದರಿಸಿ ಹಲ್ಲೆಮಾಡುವುದು, ಮನೆಗೆ ನುಗ್ಗಿ ಕಳ್ಳತನ ಮಾಡಿ ಆಭರಣ ದೋಚುತಿತ್ತು. ಇವರ ಪತ್ತೆಗೆ ಪೊಲೀಸರು ಎರಡು ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ್ದರೂ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.

ಸಿಕ್ಕಿದ್ದು ಹೇಗೆ?
ಖಚಿತ ಮಾಹಿತಿಯನ್ನು ಪಡೆದ ಬೆಂಗಳೂರು ಪೊಲೀಸರ ತಂಡ ಆಧ್ರದ ಪೊಲೀಸರ ಸಹಾಯ ಪಡೆದು ಮೇ.18. ಭಾನುವಾರ ಬೆಳಗ್ಗಿನ ಜಾವ ಕುಣಿಗಲ್ ಗಿರಿ ತಂಗಿದ್ದ ಆಂಧ್ರದ ಅನಂತಪುರಂ ಜಿಲ್ಲೆಯ ಹಿಂದೂಪುರದ ಮನೆಯನ್ನು ಸುತ್ತುವರಿಯಿತು. ಪೊಲೀಸರು ಬಂಧಿಸ ಬೇಕು ಎನ್ನುವಷ್ಟರಲ್ಲಿ ಗಿರಿ ಬೈಕನ್ನು ಏರಿ ಪರಾರಿಯಾಗಲು ಹೋಗಿ ರಸ್ತೆ ವಿಭಾಜಕ್ಕೆ ಡಿಕ್ಕಿ ಹೊಡೆದ ತಲೆಗೆ ಪೆಟ್ಟು ಮಾಡಿಕೊಂಡು ಬಿದ್ದ. ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಈಗ ಬೆಂಗಳೂರಿಗೆ ವಿಚಾರಣೆಗೆ ಕರೆ ತಂದಿದ್ದಾರೆ.

ಅಕ್ಬರುದ್ದೀನ್ ಓವೈಸಿ ಹತ್ಯೆಗೆ ಕುಣಿಗಲ್ ಗಿರಿ ಸಂಚು!
ಭೂಗತ ಲೋಕದಲ್ಲೇ ತನ್ನ ಹೆಸರು ಬೆಳೆಯಬೇಕು, ಎಂಬ ಉದ್ದೇಶದಿಂದ ಗಿರಿ ಹೆಚ್ಚು ಅಪರಾಧ ಕೃತ್ಯಗಳನ್ನು ಎಸಗಿ ಹೈದರಾಬಾದ್‌ನ ಪ್ರಭಾವಿ ರಾಜಕೀಯ ಮುಖಂಡನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪೊಲೀಸ್ ಆಯುಕ್ತ ಎಚ್. ಔರಾದ್ಕರ್ ತಿಳಿಸಿದ್ದರು. ಆಯುಕ್ತರು ಭದ್ರತೆಯ ದೃಷ್ಟಿಯಿಂದ ಹೆಸರನ್ನು ಬಹಿರಂಗ ಪಡಿಸದಿದ್ದರೂ, ಹೈದರಾಬಾದ್‌ನ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್(ಎಂಐಎಂ) ಶಾಸಕ ಅಕ್ಬರುದ್ದೀನ್ ಓವೈಸಿ ಹತ್ಯೆಗೆ ಕುಣಿಗಲ್ ಗಿರಿ ಸಂಚು ರೂಪಿಸಿದ್ದ ಶಂಕಿಸಲಾಗಿತ್ತು.
ಅಕ್ಬರುದ್ದೀನ್ ಓವೈಸಿ ಹತ್ಯೆಗೆ ಸ್ಕೆಚ್: ರೌಡಿಗಳ ಬಂಧನ

1.50 ಕೋಟಿ ರೂ. ಮೌಲ್ಯದ ಕಳವು ಮಾಲು ವಶ:
ಗಿರಿ ಹಾಗೂ ಈತನ ಸಹಚರರು ನಾಗರಿಕರಿಂದ ದೋಚಿದ್ದ 4.5 ಕೆ.ಜಿ ಚಿನ್ನಾಭರಣ, 3 ಲಕ್ಷ ರೂ. ನಗದು, ಕಾರುಗಳು, ಬೈಕ್‌ಗಳು, 2 ಪಿಸ್ತೂಲ್ ಹಾಗೂ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೊತ್ತು ವಾರಸುದಾರರಿಗೆ ವಾಪಸ್:
ಕುಣಿಗಲ್ ಗಿರಿ ಮತ್ತು ಆತನ ಸಹಚರರಿಂದ ದರೋಡೆಗೊಳಗಾಗಿ ಚಿನ್ನಾಭರಣ ಕಳೆದುಕೊಂಡಿದ್ದ ಯುವ ನಟ ಹರ್ಷ ಕುಟುಂಬ ಸೇರಿದಂತೆ ಹಲವರಿಗೆ ಆಭರಣಗಳನ್ನು ಪೊಲೀಸ್ ಆಯುಕ್ತರು ಹಿಂದಿರುಗಿಸಿದರು.












Click it and Unblock the Notifications