Mata Guruprasad: ಗುರುಪ್ರಸಾದ್ ಮೊಬೈಲ್‌ಗಳು ಪೊಲೀಸರ ವಶಕ್ಕೆ; ಸಾವಿಗೆ ಕಾರಣ...
ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ನಿರ್ದೇಶಕ, ಕಥೆಗಾರ, ನಟ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಆಘಾತವಾಗಿತ್ತು. ವಿಪರೀತ ಸಾಲ ಮಾಡಿಕೊಂಡಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಇದೀಗ ಪೊಲೀಸರು ಗುರುಪ್ರಸಾದ್ ಗೆ ಸೇರಿದ ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು ಸಾವಿನ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
ಸಾಲಗಾರರು ಕಿರುಕುಳ ಕೊಡುತ್ತಿದ್ದರಿಂದ ಬೇಸತ್ತು ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಅವರಿಗೆ ಯಾರಾದರೂ ಕರೆ ಮಾಡಿ ಬೆದರಿಕೆ ಹಾಕಿದ್ದರಾ, ಸಾಲಗಾರರು ಕರೆ ಮಾಡಿ ಕಿರುಕುಳ ಕೊಡುತ್ತಿದ್ದರಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರಿಗೆ ಈ ಮೊಬೈಲ್ ಗಳು ಸಹಾಯ ಮಾಡಲಿವೆ.

ತನಿಖೆ ಚುರುಕುಗೊಳಿಸಿದ ಪೊಲೀಸರು
ನಿರ್ದೇಶಕ ಗುರುಪ್ರಸಾದ್ ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ಇರುವ ನ್ಯೂ ಹೆವೆನ್ ರಿವಾ ಕ್ಲಬ್ ಹೌಸ್ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹಲವು ದಿನಗಳ ಹಿಂದೆಯೇ ಅವರು ಮೃತಪಟ್ಟಿದ್ದು, ಸಾವಿನ ಸಮಯ ಬಗ್ಗೆ ಮರಣೋತ್ತರ ವರದಿ ಬಂದ ಬಳಿಕ ತಿಳಿಯಲಿದೆ. ಈ ನಡುವೆ ಮಾದನಾಯಕನಹಳ್ಳಿ ಪೊಲೀಸರು ಗುರುಪ್ರಸಾದ್ ಅವರ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಹಲವು ಸಂಗತಿಗಳು ಬಯಲಾಗಿವೆ. ಅಕ್ಟೋಬರ್ 29ರಂದೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ನಿರ್ದೇಶಕ ಗುರುಪ್ರಸಾದ್ ಹಗ್ಗ ಮತ್ತು ಕರ್ಟನ್ ಖರೀದಿ ಮಾಡಿಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಮನೆಯ ಕಿಟಕಿಗಳಿಗೆ ಕರ್ಟನ್ ಹಾಕಿ, ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಗುರುಪ್ರಸಾದ್‌ರ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳನ್ನು ಡಾಟಾ ರಿಟ್ರೈವ್‌ಗಾಗಿ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಡಾಟಾ ಸಿಕ್ಕ ಬಳಿಕ ಗುರುಪ್ರಸಾದ್ ಅವರಿಗೆ ಯಾರಾದರೂ ಕರೆ ಮಾಡಿ ಕಿರುಕುಳ ಕೊಟ್ಟಿದ್ದರಾ, ಬೆದರಿಕೆ ಹಾಕಿದ್ದರಾ ಎನ್ನುವ ಬಗ್ಗೆ ಪೊಲೀಸರು ತನಿಖೆ ಮಾಡಲಿದ್ದಾರೆ.
ಅತಿಯಾದ ಸಾಲದಿಂದ ಆತ್ಮಹತ್ಯೆ?
ಸದ್ಯದ ಮಾಹಿತಿ ಪ್ರಕಾರ ಅತಿಯಾದ ಸಾಲದಿಂದಲೇ ಗುರುಪ್ರಸಾದ್ ಆಯ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿನಿಮಾಗಳ ಸೋಲಿನಿಂದ ಹತಾಶಾರಾಗಿದ್ದ ಅವರು ಕುಡಿತದ ಚಟಕ್ಕೆ ಬಿದ್ದಿದ್ದರು, ಅಲ್ಲದೆ ಆನ್‌ಲೈನ್ ರಮ್ಮಿ ಆಡುವ ಮೂಲಕ ಲಕ್ಷಾಂತರ ಹಣ ಕಳೆದುಕೊಂಡಿದ್ದರು ಎನ್ನುವ ಮಾಹಿತಿ ಕೂಡ ಇದೆ. ಆದರೆ ಪೊಲೀಸರ ತನಿಖೆ ಬಳಿಕವಷ್ಟೇ ಇದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎನ್ನುವುದು ಗೊತ್ತಾಗಲಿದೆ.
ಗುರುಪ್ರಸಾದ್‌ಗೆ ಸಾಲ ಕೊಟ್ಟವರು ಸಾಲ ಮರುಪಾವತಿ ಮಾಡುವಂತೆ ಹಿಂದೆ ಬಿದ್ದಿದ್ದರು. ಹಲವರು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದರು, ಇನ್ನೂ ಕೆಲವರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದೆಲ್ಲದರಿಂದ ಬೇಸತ್ತ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications