ಪೊಲೀಸರು ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳಿ : ಸಿಎಂ
ಬೆಂಗಳೂರು, ನ.7 : ದೇಶದ ಮಹಾನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುವ ಮೂಲಕ ಪೊಲೀಸರು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮುಯ್ಯ ಹೇಳಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸದ್ಯ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ ಎಂದು ಸಿಎಂ ವಿಶ್ಲೇಷಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಅಖಿಲ ಭಾರತ ಮಟ್ಟದ ಪೊಲೀಸ್ ಆಯುಕ್ತರ ಎರಡನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಗರಗಳಲ್ಲಿ ಸಾಮಾಜಿಕ ತಾಣಗಳ ಬಳಕೆ ಹೆಚ್ಚಾಗುತ್ತಿದೆ. ಬಹಳಷ್ಟು ಜನರು ಇದನ್ನು ಬಳಸುತ್ತಾರೆ. ಪೊಲೀಸರು ಇದನ್ನು ಬಳಸಿಕೊಂಡು, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡರೆ ಸಾರ್ವಜನಿಕರಿಗೆ ತುರ್ತಾಗಿ ಮಾಹಿತಿ ತಿಳಿಸಲು ಸಹಾಯಕವಾಗುತ್ತದೆ. ಆದ್ದರಿಂದ ಪೊಲೀಸರು ಅಪರಾಧ ಚಟುವಟಿಕೆಗಳ ಕುರಿತು ಸಾಮಾಜಿಕ ತಾಣಗಳ ಮೂಲಕ ಜನರಿಗೆ ಮಾಹಿತಿ ನೀಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು. ಇಲಾಖೆಯ ಸಿಬ್ಬಂದಿಗಳ ನಡುವಿನ ಸಂಭಾಷಣೆಗೂ ಇದು ಸಹಾಯಕವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ದೇಶದ ನಗರಗಳಿಗೆ ಜನರು ಶಿಕ್ಷಣ, ಉದ್ಯೋಗ ಅರಸಿ ವಲಸೆ ಬರುತ್ತಿದ್ದಾರೆ. ಆದ್ದರಿಂದ ನಗರಗಳ ಜನಂಖ್ಯೆ ಹೆಚ್ಚಾಗುತ್ತಿದೆ. ನಗರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಇದರಿಂದ ಪೊಲೀಸರಿಗ ಸವಾಲಾಗಿದೆ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಉತ್ತಮ ಆಡಳಿತ ನೀಡುವ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಪೊಲೀಸರ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾನ್ಯ ಜನರಿಗೆ ಕಾನೂನಿನ ಕುರಿತು ಮಾಹಿತಿ ನೀಡುವ ಜವಾಬ್ದಾರಿಯು ಇದೆ ಎಂದರು. ಜನರಿಂದ ಬಂದ ದೂರುಗಳಿಗೆ ತಕ್ಷಣ ಪ್ರತಿಕ್ರಿಯಿಸಿ ಅವರಿಗೆ ನ್ಯಾಯ ದೊರಕಿಸುಕೊಡುವುದು ಪೊಲೀಸರ ಕರ್ತವ್ಯ ಎಂದರು.
ಗೃಹ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಗೃಹ ಇಲಾಖೆ ಹೆಚ್ಚುವರಿ ಆಯುಕ್ತ ಎಸ್.ಕೆ.ಪಟ್ನಾಯಕ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. (ಬೆಂಗಳೂರು ನಗರ ಪೊಲೀಸ್ ಫೇಸ್ ಬುಕ್ ಮತ್ತು ಟ್ವೀಟರ್ ತಾಣಗಳು)












Click it and Unblock the Notifications