Bengaluru: ಚುನಾವಣೆ ಬೆನ್ನಲ್ಲೆ ರೌಡಿಗಳಿಗೆ ಬಿಸಿ ಮುಟ್ಟಿಸಿದ ಖಾಕಿ: 500 ರೌಡಿಗಳ ಮೇಲೆ ದಾಳಿ- 67 ಮಂದಿ ಬಂಧನ!
ಬೆಂಗಳೂರು ಏಪ್ರಿಲ್ 21: ರಾಜ್ಯ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಗರದ ರೌಡಿಗಳಿಗೆ ಖಾಕಿ ಬಿಸಿ ಮುಟ್ಟಿಸಿದೆ. 500 ರೌಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, 67 ಮಂದಿಯನ್ನು ಜಾಮೀನು ರಹಿತ ವಾರೆಂಟ್‌ಗಳೊಂದಿಗೆ ಬಂಧಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದೆ. ಹೀಗಾಗಿ ಬೆಂಗಳೂರು ಪೊಲೀಸರು ನಗರದ ವಿವಿಧೆಡೆ 500ಕ್ಕೂ ಹೆಚ್ಚು ರೌಡಿಗಳ ಮೇಲೆ ದಾಳಿ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಮಾಜವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮತ್ತು ಮತದಾನದಲ್ಲಿ ಗೊಂದಲ ಉಂಟುಮಾಡುವ ವಿರುದ್ಧ ರೌಡಿಗಳಿಗೆ ಎಚ್ಚರಿಕೆ ನೀಡುವುದು ಇದರ ಉದ್ದೇಶವಾಗಿದೆ. ಪೊಲೀಸ್ ಇಲಾಖೆಯ ಕೇಂದ್ರ, ದಕ್ಷಿಣ, ಪಶ್ಚಿಮ ಮತ್ತು ಉತ್ತರ ವಿಭಾಗಗಳಲ್ಲಿ 1,500 ಕ್ಕೂ ಹೆಚ್ಚು ಪೊಲೀಸರು ಈ ದಾಳಿ ನಡೆಸಿದರು.
ಕನಿಷ್ಠ ಇಬ್ಬರು ರೌಡಿಗಳ ಮನೆಗಳಲ್ಲಿ ಮಾರಕಾಸ್ತ್ರಗಳು ಪೊಲೀಸರಿಗೆ ಸಿಕ್ಕಿವೆ. ಅವರ ವಿರುದ್ಧ ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ಕನಿಷ್ಠ 67 ರೌಡಿಗಳ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಶ್ಚಿಮ ವಿಭಾಗವೊಂದರಲ್ಲೇ ಇನ್ನೂರು ರೌಡಿಗಳ ಮೇಲೆ ದಾಳಿ ನಡೆದಿದೆ.

ಈಗಾಘಲೇ ಪಕ್ಷಗಳು ನಾಮಪತ್ರ ಸಲ್ಲಿಕೆಯನ್ನು ಪೂರ್ಣಗೊಳಿಸಿದ್ದು, ಮತಬೇಟೆಯನ್ನು ಆರಂಭಿಸಿವೆ. ಕೇಂದ್ರ ನಾಯಕರು ಹಾಗೂ ಸ್ಟಾರ್ ಪ್ರಚಾರಕರೊಂದಿಗೆ ಪ್ರಚಾರ ನಡೆಸಲು ಬಿಗ್ ಪ್ಲ್ಯಾನ್ ಮಾಡಿಕೊಂಡಿವೆ. ನಗರದಲ್ಲಿ ಅಹಿತಕರ ಘಟನೆಗಳನ್ನು ತಪ್ಪಿಸಲು ಖಾಕಿ ರೌಡಿಗಳಿಗೆ ಬಿಸಿ ಮುಟ್ಟಿಸಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications