ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ಶೋ: ಟ್ರಾಫಿಕ್ ಸಂಕಷ್ಟ- ಬಿಜೆಪಿಗೆ ಲಾಭ ಅಥವಾ ನಷ್ಟ?
ಬೆಂಗಳೂರು, ಏಪ್ರಿಲ್ 01: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ತೊಡಗಿಕೊಂಡಿದ್ದಾರೆ. ಅವರು ಶನಿವಾರ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ ಬಿಜೆಪಿಗೆ ಮತ ನೀಡುವಂತೆ ಜನರಲ್ಲಿ ಕೇಳಿಕೊಂಡರು. 5.3 ಕಿಲೋಮೀಟರ್ ಉದ್ದದ ರೋಡ್‌ಶೋ ಮಾಗಡಿ ರಸ್ತೆ, ನೈಸ್ ರಸ್ತೆ ಜಂಕ್ಷನ್ ಸೇರಿದಂತೆ ಉತ್ತರ ಬೆಂಗಳೂರಿನ ವಿವಿಧ ಸ್ಥಳಗಳ ಮೂಲಕ ಸುಮನಹಳ್ಳಿಯವರೆಗೆ ಹಾದು ಹೋಗಿದೆ. ಇದರಿಂದ ಭಾರೀ ಟ್ರಾಪಿಕ್ ಕಿರಿಕಿರಿ ಉಂಟಾಗಿದೆ.
ಏಪ್ರಿಲ್ 29ರ ಮಧ್ಯಾಹ್ನ 2 ರಿಂದ 7:30 ರ ವರೆಗೆ (ಐಎಸ್‌ಟಿ) ಪ್ರಧಾನಿ ಮೋದಿಯವರ ರೋಡ್‌ಶೋ ಕಾರಣದಿಂದಾಗಿ ಹಲವಾರು ರಸ್ತೆಗಳನ್ನು ಮುಚ್ಚಲಾಗಿತ್ತು. ಮಾಗಡಿ ರೋಡಿನಲ್ಲಿ ಪೊಲೀಸರು ವಾಹನಗಳಿಗೆ ನಿರ್ಬಂಧ ಹೇರಿದ್ದರಿಂದ ಪೊಲೀಸರು ಈ ಕೆಳಗಿನ ರೋಡುಗಳನ್ನು ಬಳಸಲು ಸೂಚಿಸಿದ್ದರು.

ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್ಸನ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ., ನೃಪತುಂಗ ರಸ್ತೆ, ಕೃಂಬಿಗಲ್ ರಸ್ತೆ., ದೇವನಾಗ ರಸ್ತೆ, ಲಾಲ್‌ಬಾಗ್ ವೆಸ್ಟ್ ಗೇಟ್ ರಸ್ತೆ, ಆರ್‌ವಿ ಕಾಲೇಜು ಹಾಗೂ ಬಸವನಗುಡಿ 50 ಫೀಟ್ ಕೆನರಾ ಬ್ಯಾಂಕ್ ರಸ್ತೆಗಳನ್ನು ಉಪಯೋಗಿಸಲು ಪ್ರಯಾಣಿಕರಿಗೆ ಸೂಚಿಸಲಾಗಿತ್ತು.
ಮೋದಿ ರೋಡ್‌ಶೋದಿಂದಾಗಿ ಭಾರೀ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರಧಾನಿ ಬೆಂಗಾವಲು ಪಡೆ ಹಾದುಹೋಗುವ ಕೆಲವು ರಸ್ತೆಗಳನ್ನು ತಪ್ಪಿಸುವಂತೆ ಪೊಲೀಸರು ಜನರಿಗೆ ಸಂಚಾರ ಸಲಹೆಯನ್ನು ನೀಡಿದ್ದರು. ಮೋದಿ ಅವರು ರೋಡ್ ಶೋ ನಡೆಸುವ ಮಾರ್ಗದುದ್ದಕ್ಕೂ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಮೋದಿ ರೋಡ್ ಶೋನಿಂದ ಬಿಜೆಪಿಗೆ ಲಾಭ?
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋನಿಂದ ಬಿಜೆಪಿಗೆ ಲಾಭವಾಗಬಹುದೆಂದು ಕೇಸರಿ ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಜನಪ್ರಿಯತೆ ಹೊಂದಿರುವ ಮೋದಿ ಅವರನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಇದರಿಂದ ಬಿಜೆಪಿ ಪರ ಅಲೆ ಏಳಲಿದೆ ಎಂಬುದು ಪಕ್ಷದ ಮುಖಂಡರ ವಾದವಾಗಿದೆ.

ಪ್ರಧಾನಿ ಮೋದಿ ಅವರು ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಹ್ಮದಾಬಾದ್‌ನಲ್ಲಿ ಹದಿನಾಲ್ಕು ಕಿಲೋಮೀಟರ್‌ಗಳ ರೋಡ್ ಶೋ ನಡೆಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದಿಂದ ಗೆಲುವು ಸಾಧಿಸಿತ್ತು. ಇದೇ ತಂತ್ರವನ್ನು ರಾಜ್ಯದಲ್ಲಿ ಬಳಸಲು ಬಿಜೆಪಿ ಮುಂದಾಗಿದೆ.
ಮೋದಿಯನ್ನೇ ನೆಚ್ಚಿಕೊಂಡ ರಾಜ್ಯ ಬಿಜೆಪಿ
ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಹಲವು ಆರೋಪಗಳನ್ನು ಎದುರಿಸುತ್ತಿದೆ. ಭ್ರಷ್ಟಾಚಾರ, ಕಮಿಷನ್ ಹಗರಣ ಹಾಗೂ ಕುಂಠಿತ ಅಭಿವೃದ್ದಿಯಂತಹ ಗಂಭೀರ ಆರೋಪಗಳು ರಾಜ್ಯ ಸರ್ಕಾರದ ಮೇಲಿವೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಬಲ ಲಿಂಗಾಯತ ಸಮುದಾಯದ ನಾಯಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದ, ಸಮುದಾಯದ ಕೋಪಕ್ಕೆ ಗುರಿಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಪ್ರಧಾನಿ ಮೋದಿಯನ್ನೇ ನೆಚ್ಚಿಕೊಂಡಿದ್ದಾರೆ.

ರೋಡ್‌ಶೋನಿಂದ ಬೆಂಗಳೂರಿಗರಿಗೆ ಸಂಕಷ್ಟ
ಪ್ರಧಾನಿ ಮೋದಿ ಅವರ ರೋಡ್ ಶೋ ಬೆಂಗಳೂರಿನಲ್ಲಿ ಭಾರಿ ಸಂಕಷ್ಟಗಳನ್ನು ಉಂಟುಮಾಡಿವೆ. ಟ್ರಾಪಿಕ್ ಜಾಮ್‌ಗಳಿಗೆ ಕುಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ರೋಡ್ ಶೋನಿಂದಾಗಿ ಜನರು ಪರದಾಡುವಂತಾಗಿದೆ. ಪ್ರಧಾನಿ ಮೋದಿ ರೋಡ್‌ಶಾಗಾಗಿ ಹಲವು ಪ್ರಮುಖ ರಸ್ತೆಗಳಿಗೆ ನಿರ್ಬಂಧ ಹೇರಲಾಗಿತ್ತು. ಟ್ರಾಪಿಕ್ ಹೆಚ್ಚಿರುವ ರಸ್ತೆಗಳಲ್ಲಿ ವಾಹನಗಳನ್ನು ತಿರುಗಿಸಲು ಸೂಚನೆ ನೀಡಲಾಗಿತ್ತು. ಕನಿಷ್ಟ ಮೂರು ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಎಲ್ಲ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಇದರಿಂದ ಬೆಂಗಳೂರಿನಲ್ಲಿ ಭಾರೀ ಟ್ರಾಪಿಕ್ ಸಮಸ್ಯೆ ಎದುರಾಗಿತ್ತ,
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರ ಭದ್ರತೆ ಹಿನ್ನೆಲೆ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಆರೋಪಿಸಲಾಗಿದೆ. ಕೇವಲ ಎರಡು ಕಿಲೋಮೀಟರ್ ಸಂಚರಿಸಲು ಎರಡು ಗಂಟೆ ತೆಗೆದುಕೊಂಡಿದೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ. ಇದು ಬಿಜೆಪಿಗೆ ಲಾಭ ಮಾಡಿಕೊಂಡುವುದಕ್ಕಿಂತ, ನಷ್ಟ ಮಾಡಕೊಡಲಿದೆ ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications