ಸರಳವಾಗಿ, ಕೆಲವೇ ಗಂಟೆಗಳಲ್ಲಿ ಮುಗಿದ ದೇಶದ ಪ್ರಧಾನಿ ಮೋದಿ ತಾಯಿಯ ಅಂತ್ಯಕ್ರಿಯೆ
ಬೆಂಗಳೂರು, ಡಿ. 30: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದಾಗಿ ಬಳಲುತ್ತಿದ್ದ ಅವರನ್ನು ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶುಕ್ರವಾರ ವಯೋಸಹಜ ಕಾಯಿಲೆಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಾಯಿಯ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ಒಬ್ಬ ಜನಪ್ರಿಯ ಪ್ರಧಾನಿಯವರ ತಾಯಿಯ ಅಂತ್ಯಸಂಸ್ಕಾರವೆಂದರೆ, ದೊಡ್ಡ ಮೆರವಣಿಗೆ, ಜನಸಂದಣಿ, ಗಣ್ಯರು, ಭದ್ರತೆ ಇರುತ್ತದೆ. ಆದರೆ, ಪ್ರಧಾನಿ ಮೋದಿಯವರ ಮೋದಿಯವರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರವಿಲ್ಲದೇ, ಕೆಲವೇ ಗಂಟೆಗಳಲ್ಲಿ ಮುಗಿದು ಹೋಗಿದ್ದು, ಹಲವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ ತಮ್ಮ ತಾಯಿ ನಿಧನದಿಂದ ಅಹಮದಾಬಾದ್‌ಗೆ ಹೋಗಿ ತಮ್ಮ ತಾಯಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.
ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯಕ್ರಿಯೆ ಇದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. "ಬೆಳಗ್ಗೆ 6.00 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ ಮುಗಿದೋಯ್ತು. ಇದಕ್ಕೆ ಕೇವಲ 3:30 ಗಂಟೆ ಅಷ್ಟೇ. ದೇಶದ ಜನಪ್ರಿಯ ಪ್ರಧಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ಮುಗಿದೋಯ್ತು...!" ಎಂದು ಹಲವರು ಬರೆದುಕೊಂಡಿದ್ದಾರೆ.
"ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ. ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ. ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ. ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ. ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ. ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ" ಎಂದಿದ್ದಾರೆ.

"ಅಂತ್ಯ ಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ. ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ. ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯಕ್ರಿಯೆ ಇದು" ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ತಮ್ಮ ತಾಯಿಯ ನಿಧನದ ಬಗ್ಗೆ ಮಾಹಿತಿ ನೀಡಿ "ಭವ್ಯವಾದ ಶತಮಾನವು ಭಗವಂತನ ಪಾದದಲ್ಲಿ ನಿಂತಿದೆ. ಅಮ್ಮನಲ್ಲಿ ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನ ತಪಸ್ವಿಯ ಪ್ರಯಾಣವನ್ನು ಒಳಗೊಂಡಿರುವ ತ್ರಿಮೂರ್ತಿಗಳನ್ನು ನಾನು ಯಾವಾಗಲೂ ಭಾವಿಸುತ್ತೇನೆ" ಎಂದಿದ್ದಾರೆ.












Click it and Unblock the Notifications