ಬೆಂಗಳೂರು; ಪಿಜಿಗಳು ಜಿಎಸ್‌ಟಿ ವ್ಯಾಪ್ತಿಗೆ, ದರ ಏರಿಕೆ
ಬೆಂಗಳೂರು, ಜುಲೈ 30; ಬೆಂಗಳೂರು ನಗರದಲ್ಲಿನ ಖಾಸಗಿ ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ವಸತಿ ಮಾಡುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಿದೆ. ಹೌದು, ಶೀಘ್ರವೇ ದರಗಳು ಹೆಚ್ಚಳವಾಗುವ ನಿರೀಕ್ಷೆ ಇದೆ.
ಬೆಂಗಳೂರಿನ ಜಿಎಸ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಪೀಠ ಖಾಸಗಿ ಹಾಸ್ಟೆಲ್ ಅಥವ ಪಿಜಿಗಳಲ್ಲಿ ವಾಸ್ತವ್ಯ ಹೂಡುವವರು ಶೇ 12 ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕು ಎಂದು ಆದೇಶ ನೀಡಿದೆ. ಪಿಜಿಗಳಿಗೆ ಜಿಎಸ್‌ಟಿ ಅನ್ವಯವಾಗುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿ, ಈ ಆದೇಶ ನೀಡಲಾಗಿದೆ.

ಖಾಸಗಿ ಹಾಸ್ಟೆಲ್‌ಗಳು, ಪಿಜಿಗಳನ್ನು ವಸತಿ ಕಟ್ಟಡಗಳಿಗೆ ಹೋಲಿಸಲಾಗದು ಮತ್ತು ಅವುಗಳಿಗೆ ತೆರಿಗೆ ವಿನಾಯಿತಿಯನ್ನೂ ಸಹ ನೀಡಲಾಗದು ಎಂದು ಎಎಆರ್ ಪೀಠ ಆದೇಶದಲ್ಲಿ ತಿಳಿಸಿದೆ. ಪಿಜಿಗಳಲ್ಲಿ ವಾಸ್ತವ್ಯ ಹೂಡುವವರು ಬಾಡಿಗೆ ಜೊತೆ ಜಿಎಸ್‌ಟಿ ಸಹ ಪಾವತಿ ಮಾಡಬೇಕು ಎಂದು ಹೇಳಿದೆ.
ಜಿಎಸ್‌ಟಿ ವಿನಾಯಿತಿ ಇತ್ತು; ಜುಲೈ 17ರ ತನಕ ದಿನಕ್ಕೆ 1 ಸಾವಿರ ರೂ. ವರೆಗಿನ ಬಾಡಿಗೆ ಇರುವ ಹೋಟಲ್, ಕ್ಲಬ್, ಕ್ಯಾಂಪ್‌ಸೈಟ್ ಇತರ ಕಡೆಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿನಾಯಿತಿ ನೀಡಲಾಗಿತ್ತು. ಈಗ ಖಾಸಗಿ ಹಾಸ್ಟೆಲ್, ಪಿಜಿಗಳು ಜಿಎಸ್‌ಟಿಗೆ ನೋಂದಾಯಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಕುರಿತು ಸ್ಪಷ್ಟನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ತಾವು ಪಡೆಯುವ ಬಾಡಿಗೆಗೆ ಜಿಎಸ್‌ಟಿಯನ್ನು ಸಹ ವಾಸ್ತವ್ಯ ಹೂಡುವವರು ಪಾವತಿಸಬೇಕು. ಪಿಜಿಗಳು ಇದನ್ನು ಅವರು ತಮ್ಮಲ್ಲಿ ವಸತಿ ಮಾಡಿದವರಿಂದ ವಸೂಲು ಮಾಡಬಹುದು ಎಂದು ತಿಳಿಸಲಾಗಿದೆ.
ಶ್ರೀಸಾಯಿ ಲಕ್ಸುರಿಯಸ್ ಸ್ಟೇ ಎಲ್‌ಎಲ್‌ಪಿ ಹಾಸ್ಟೆಲ್‌ಗಳಿಗೆ ಜಿಎಸ್‌ಟಿ ಅನ್ವಯದ ಬಗ್ಗೆ ಸ್ಪಷ್ಟನೆ ಕೋರಿ ಎಎಅರ್‌ಗೆ ಅರ್ಜಿ ಸಲ್ಲಿಸಿತ್ತು. ಈಗ ಸ್ಪಷ್ಟನೆ ದೊರಕಿರುವುದರಿಂದ ಸಹಜವಾಗಿಯೇ ಪಿಜಿಗಳಲ್ಲಿನ ವಿದ್ಯಾರ್ಥಿಗಳು/ ಉದ್ಯೋಗಿಗಳು ಹೆಚ್ಚಿನ ಮೊತ್ತ ಪಾವತಿ ಮಾಡಬೇಕಿದೆ.
ಬೆಂಗಳೂರು ನಗರದಲ್ಲಿ ಪಿಜಿಗಳಲ್ಲಿ ವಸತಿ ಹೂಡಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಸಂಖ್ಯೆ ಅಧಿಕವಾಗಿದೆ. ಬಾಡಿಗೆ ಮನೆ ಮಾಡಲಾಗದವರು ಪಿಜಿಗಳಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಪ್ರತಿ ತಿಂಗಳು ಇವರು ಕಟ್ಟುವ ಪಿಜಿ ಬಾಡಿಗೆ ಜೊತೆಗೆ ಈಗ ಶೇ 12ರಷ್ಟು ಜಿಎಸ್‌ಟಿಯನ್ನು ಸಹ ಪಾವತಿ ಮಾಡಬೇಕಿದೆ.
ಕಾಲೇಜಿಗೆ ಹತ್ತಿರವಿರುವ, ಕಛೇರಿಗೆ ಹತ್ತಿರವಾಗಿರುವ ಪಿಜಿಗಳಲ್ಲಿ ವಾಸ್ತವ್ಯ ಹೂಡಿ ವ್ಯಾಸಂಗ, ಕೆಲಸಕ್ಕೆ ಹೋಗುತ್ತಾರೆ. ನಮ್ಮ ಮೆಟ್ರೋ ಸಂಚಾರ ಬೆಂಗಳೂರಿನಲ್ಲಿ ಆರಂಭವಾದ ಬಳಿಕ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪಿಜಿಗಳಿಗೆ ಭಾರೀ ಬೇಡಿಕೆ ಇದೆ.
ಸುಮಾರು 5 ಸಾವಿರದಿಂದ ಆರಂಭವಾಗಿ ವಸತಿ ಸೌಲಭ್ಯಗಳಿಗೆ ಅನುಗುಣವಾಗಿ ಪಿಜಿಗಳಿಗೆ ದರಗಳ ನಿಗದಿಯಾಗಿವೆ. ಆದರೆ ಈಗ ಪಿಜಿಗಳ ವಾಸ್ತವ್ಯ ಸಹ ಜಿಎಸ್‌ಟಿ ವ್ಯಾಪ್ತಿಗೆ ಬರುವ ಕಾರಣ ದರಗಳು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications