Cubbon Park: ಕಬ್ಬನ್ ಪಾರ್ಕ್‌ನಲ್ಲಿ ಇನ್ಮುಂದೆ ಇವೆಲ್ಲ ಮಾಡಂಗಿಲ್ಲ, ಖಡಕ್ ರೂಲ್ಸ್ ಜಾರಿ
ಉದ್ಯಾನಗರಿಯ ಆಮ್ಲಜನಕ ಎಂದು ಕರೆಯಲ್ಪಡುವ ಕಬ್ಬನ್ ಪಾರ್ಕ್ ಒಳಗೆ ಸದ್ಯ ಯಾರು ಬೇಕಾದರೂ ಉಚಿತವಾಗಿ ಪ್ರವೇಶಿಸಬಹುದು, ಅಲ್ಲಿನ ಪ್ರಕೃತಿ ಸೊಬಗನ್ನು ಸವಿಯಬಹುದು. ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಾವಿರಾರು ಮಂದಿ ವಾಕಿಂಗ್, ಜಾಗಿಂಗ್ ಮಾಡುತ್ತಾ ಆರೋಗ್ಯ ಕೂಡ ಕಾಪಾಡಿಕೊಳ್ಳುತ್ತಿದ್ದಾರೆ. ಸದ್ಯ ಕಬ್ಬನ್‌ಪಾರ್ಕ್‌ನಲ್ಲಿ ಕಠಿಣ ನಿಯಮವೊಂದು ಜಾರಿಯಾಗಿದ್ದು, ಈ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಕೆಲವರು ಕಬ್ಬನ್ ಪಾರ್ಕ್ ನಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಪಾರ್ಟಿ ಆಯೋಜಿಸುವುದು, ಹೆಚ್ಚು ಜನರನ್ನು ಸೇರಿಸುವುದು ಇಲಾಖೆ ಗಮನಕ್ಕೆ ಬಂದಿದೆ. ಹಾಗಾಗಿ ಇನ್ನು ಮುಂದೆ ಕಬ್ಬನ್ ಪಾರ್ಕ್‌ನಲ್ಲಿ 20ಕ್ಕಿಂತ ಹೆಚ್ಚು ಜನರು ಸೇರಿ ಆಯೋಜಿಸುವ ಪಾರ್ಟಿ ಅಥವಾ ಇನ್ನಿತರೆ ಕಾರ್ಯಕ್ರಮಗಳಿಗೆ ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯಗೊಳಿಸಿದೆ.

ಉದ್ಯಾನವನದ ನಿಯಮಗಳ ಪ್ರಕಾರ 20 ಮಂದಿಗಿಂತ ಹೆಚ್ಚು ಜನರು ಸೇರಿ ಪಾರ್ಕ್‌ನಲ್ಲಿ ಯಾವುದೇ ಪಾರ್ಟಿ, ಇನ್ನಿತರೆ ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಪಡೆಯಲೇಬೇಕು. ಆದರೆ ಇತ್ತೀಚೆಗೆ ಕಬ್ಬನ್‌ಪಾರ್ಕ್‌ನಲ್ಲಿ ಮನಬಂದಂತೆ ಜನ ಸೇರುತ್ತಿದ್ದು, ತಮ್ಮಿಷ್ಟದಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ.
ಇದರಿಂದಾಗಿ ಪಾರ್ಕ್‌ಗೆ ಬರುವ ಸಾರ್ವಜನಿಕರಿಗೆ ಕಿರಿಕಿರಿಯೂ ಆಗುತ್ತದೆ. ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಇಲ್ಲಿಗೆ ಹೆಚ್ಚು ಮಂದಿ ಪುಸ್ತಕ ಪ್ರೇಮಿಗಳು ಬಂದು ಹುಲ್ಲಿನ ಮೇಲೆ ಕುಳಿತು ಶಾಂತವಾಗಿ ಪುಸ್ತಕ ಓದುತ್ತಾರೆ. ಇದಕ್ಕೆಂದೇ ಹಲವು ಗ್ರೂಪ್‌ಗಳು ಕೂಡ ಇವೆ ಎನ್ನಲಾಗಿದೆ. ಈ ರೀತಿ ಹೆಚ್ಚು ಜನ ಸೇರಿ ಗದ್ದಲ ಉಂಟು ಮಾಡುವುದರಿಂದ ಅಲ್ಲಿ ಉಳಿದವರಿಗೆ ಕಿರಿಕಿರಿಯಾಗುತ್ತದೆ ಎಂದು ದೂರುಗಳು ತೋಟಗಾರಿಕೆಗೆ ದೂರುಗಳು ಬಂದ ಹಿನ್ನೆಲೆ ಈ ನಿಯಮ ಜಾರಿ ಮಾಡಲಾಗಿದೆ.

ನಿನ್ನೆ ಕೂಡ ಕಬ್ಬನ್ ಪಾರ್ಕ್‌ನಲ್ಲಿ ಸಾವಿರಾರು ಮಂದಿ ಪೂರ್ವಾನುಮತಿ ಇಲ್ಲದೆ ಸೇರಿ ಗದ್ದಲ ಉಂಟು ಮಾಡಿದ್ದಾರೆ ಎಂದು ದೂರುಗಳು ಕೇಳಿಬಂದಿದ್ದು, ಇಲ್ಲಿನ ಬ್ಯಾಂಡ್‌ಸ್ಟ್ಯಾಂಡ್ ಆವರಣದ ಬಳಿ 1,000ಕ್ಕೂ ಹೆಚ್ಚು ಜನರು ಖಾಸಗಿಯಾಗಿ ಸೇರಿದ್ದಾರೆ, ಅಲ್ಲದೆ ಪೂರ್ವಾನುಮತಿ ಇಲ್ಲದೆ ಕೂಟ ಸೇರಿರುವುದು ಕಂಡುಬಂದಿದೆ. ಇದು ತೋಟಗಾರಿಕೆ ಇಲಾಖೆ ಗಮನಕ್ಕೆ ಬಂದಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೂಡ ತೆಗೆದುಕೊಂಡಿದೆ.
ಹೆಚ್ಚು ಜನ ಸೇರಿದ್ದನ್ನು ಕಂಡ ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿ ಇಲಾಖೆ ಗಮನಕ್ಕೆ ತಂದಿದ್ದಾರೆ. ಈ ಜನಸಂದಣಿಯಿಂದ ಕಬ್ಬನ್‌ಪಾರ್ಕ್‌ನಲ್ಲಿ ಪುಸ್ತಕ ಓದುಗರಿಗೆ ಅಡಚಣೆಯಾಗಿದ್ದು, ಈ ವಿಚಾರವಾಗಿ ತೋಟಗಾರಿಕೆ ಇಲಾಕೆ ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ ಇನ್ನು ಮುಂದೆ ಇಂತಹ ಯಾವುದೇ ಅನುಮತಿ ಇಲ್ಲದ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಈ ನಿಯಮ ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ, ಸಾರ್ವಜನಿಕರು ಇದನ್ನು ಪಾಲಿಸುತ್ತಿರಲಿಲ್ಲ. ಇನ್ನು ಮುಂದೆ ಈ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ಅದರಂತೆ ಕಬ್ಬನ್ ಪಾರ್ಕ್‌ನಲ್ಲಿ 20ಕ್ಕೂ ಹೆಚ್ಚು ಜನರು ಭಾಗವಹಿಸುವ ಯಾವುದೇ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಸಬೇಕು ಎಂದು ಹೇಳಿದೆ.
ಈ ಮಾರ್ಗಸೂಚಿಯಂತೆ 20 ಜನರನ್ನು ಮೀರುವ ಕೂಟಗಳಿಗೆ ಮೊದಲೇ ಅನುಮತಿ ಪಡೆಯುವುದು ಅಗತ್ಯವಾಗಿದ್ದು, ಪೊಲೀಸ್ ಇಲಾಖೆಯಿಂದಲೂ ಅನುಮತಿ ಪಡೆಯಬೇಕು ಎಂದೂ ತಿಳಿಸಿದೆ. ಕಬ್ಬನ್ ಪಾರ್ಕ್ ಆಡಳಿತವು ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕ ವಾತಾವರಣವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ, ಹಾಗೆಯೇ ಉದ್ಯಾನವನದ ನಿಯಮಗಳ ಪಾಲನೆಗಳು ಖಚಿತಪಡಿಸುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ (ಕಬ್ಬನ್ ಪಾರ್ಕ್) ಕುಸುಮಾ ಅವರು ತಿಳಿಸಿದ್ದಾರೆ.












Click it and Unblock the Notifications