ಇನ್ನು ಸಂಪಿಗೆ ರಸ್ತೆ-ಪೀಣ್ಯ ನಡುವೆ ಮೆಟ್ರೋದಲ್ಲಿ ಸಂಚರಿಸಿ
ಬೆಂಗಳೂರು, ಫೆ. 20 : ಪೀಣ್ಯದಿಂದ ಸಂಪಿಗೆರಸ್ತೆ ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಲು ಬೆಂಗಳೂರಿಗರು ಸಿದ್ಧರಾಗುವ ಕಾಲ ಹತ್ತಿರವಾಗಿದೆ. ಹೌದು, ಪೀಣ್ಯ ಸಂಪಿಗೆ ರಸ್ತೆಯಲ್ಲಿ ನಮ್ಮಮೆಟ್ರೋ ಸಂಚಾರ ಆರಂಭಿಸಲು ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದು, ವಾರದೊಳಗೆ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
9.9 ಕಿ.ಮೀ ಅಂತರದ ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಫೆ. 10 ರಿಂದ ಫೆ. 14ರವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಈ ಮಾರ್ಗದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಆದ್ದರಿಂದ ಫೆ. 18ರಂದು ಮೆಟ್ರೋ ರೈಲು ಸಂಚಾರಕ್ಕೆ 'ಸುರಕ್ಷತಾ ಪ್ರಮಾಣಪತ್ರ'ವನ್ನು ಬಿಎಂಆರ್‌ಸಿಎಲ್‌ಗೆ ಕಳುಹಿಸಿಕೊಟ್ಟಿದೆ.

ಸುರಕ್ಷತಾ ಪತ್ರ ಕೈ ಸೇರಿದ ತಕ್ಷಣ ಮಾರ್ಗವನ್ನು ಸಂಚಾರಕ್ಕೆ ಮುಕ್ತವಾಗಿಸಲು ಸರ್ಕಾರದ ಅನುಮತಿಯನ್ನು ಬಿಎಂಆರ್ ಸಿಎಲ್ ಪಡೆದಿದೆ. ಸದ್ಯದ ಮಾಹಿತಿಯಂತೆ ಫೆ.28ರಂದು ಪೀಣ್ಯ-ಸಂಪಿಗೆ ರಸ್ತೆ ಮಾರ್ಗ ಉದ್ಘಾಟನೆಯಾಗಲಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕೊಂಚ ನೆಮ್ಮದಿ ದೊರೆಯಲಿದೆ. [ಮೆಟ್ರೋ ಕಾಮಗಾರಿ 2015ಕ್ಕೆ ಪೂರ್ಣ]
ದರವೆಷ್ಟು : ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಅಂದಾಜು 25 ರೂ. ಪ್ರಯಾಣ ದರ ನಿಗದಿಪಡಿಸುವ ಸಾಧ್ಯತೆ ಇದೆ. ಮೆಜೆಸ್ಟಿಕ್ ನಿಂದ ಪೀಣ್ಯವರೆಗೆ ಬಿಎಂಟಿಸಿ ವೋಲ್ವೊದಲ್ಲಿ ಬಸ್ಸಿನಲ್ಲಿ 50 ರೂ., ಹವಾನಿಯಂತ್ರಿತ ಮಾರ್ಕೊಪೋಲೊ ಬಸ್ಸಿನಲ್ಲಿ 25 ರೂ. ಪ್ರಯಾಣ ದರವಿದೆ. ಆದ್ದರಿಂದ ನಮ್ಮ ಮೆಟ್ರೋ ದರವನ್ನು ಅದಕ್ಕಿಂತ ಕಡಿಮೆ ಮಾಡಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ. [ದುಬಾರಿಯಾಗಲಿದೆ ಮೆಟ್ರೋ ಪ್ರಯಾಣದರ]
ಈ ಮಾರ್ಗದಲ್ಲಿ 10 ನಿಲ್ದಾಣಗಳು ಬರಲಿದ್ದು ಪ್ರತಿನಿತ್ಯ ಸುಮಾರು 70-80 ಸಾವಿರ ಮಂದಿ ಪ್ರಯಾಣಿಸಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೊ ರೈಲು ಸಂಚರಿಸಲಿದ್ದು, ಕೇವಲ 18 ನಿಮಿಷಗಳಲ್ಲಿ ಪೀಣ್ಯ ತಲುಪಲಿದೆ. [ಎರಡನೇ ಹಂತದ ಮೆಟ್ರೋಗೆ ಕೇಂದ್ರದ ಅನುಮತಿ]
ಸಿಎಂ ಹೇಳಿಕೆ : ಪೀಣ್ಯ-ಸಂಪಿಗೆ ರಸ್ತೆ ನಡುವಿನ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರವನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಫೆ.18ರಂದು ಸುರಕ್ಷತಾ ಪ್ರಮಾಣ ಪತ್ರ ನೀಡಿದ್ದಾರೆ. ಮಾರ್ಗದಲ್ಲಿ ಸಂಚಾರ ಆರಂಭಿಸಲು ಬಿಎಂಆರ್ ಸಿಎಲ್ ಸಿದ್ಧವಾಗಿದ್ದು, ಶೀಘ್ರವೇ ರೈಲುಮಾರ್ಗವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಹೇಳಿದ್ದಾರೆ.


Click it and Unblock the Notifications
