ಪತ್ನಿ ಕೊಂದು ಕಥೆ ಕಟ್ಟಿದ ಪತಿ, ಪರಾರಿ ಯತ್ನದಲ್ಲಿ ಸಿಕ್ಕಿ ಬಿದ್ದ
ಬೆಂಗಳೂರು, ಫೆ.2: ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಚಾಕು ಹಿಡಿದು ವೀರಾವೇಶದಿಂದ ಪತ್ನಿಯನ್ನು ಕೊಚ್ಚಿ ಹಾಕಿದ ಪರಶುರಾಮ ಎಂಬ ಎಲೆಕ್ಟ್ರಿಷನ್ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಪತ್ನಿ ಕೊಲೆಗೆ ಆತ್ಮಹತ್ಯೆ ಕಥೆ ಕಟ್ಟಿ ಪರಾರಿಯಾಗಲು ಯತ್ನಿಸಿದ. ಈಗ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.
ನೆಲಗದರನಹಳ್ಳಿ ವೃತ್ತದ ನಾರಾಯಣಸ್ವಾಮಿ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದ ಪತ್ನಿ ಯಲ್ಲಮ್ಮ (23) ಎಂಬ ಗೃಹಿಣಿಯೇ ಮೃತ ದುರ್ದೈವಿ. ಯಲ್ಲಮ್ಮಳ ಹೊಟ್ಟೆಗೆ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆಗೈದ ಪತಿ ಪರಶುರಾಮ (25) ಕೆಲ ಹೊತ್ತಿನ ನಂತರ 108 ಆಂಬುಲೆನ್ಸ್ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಮಾಡಿ ಆತ್ಮಹತ್ಯೆಯ ಕಥೆ ಕಟ್ಟಿ ದ.
ಸುರಪುರ ಮೂಲದ ಪರಶುರಾಮ ಶಹಾಪುರದ ಯಲ್ಲಮ್ಮನನ್ನು ಕಳೆದ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು,ದಂಪತಿ ನಗರಕ್ಕೆ ಬಂದು ನೆಲಗದರನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಪರಶುರಾಮ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಯಲ್ಲಮ್ಮ ಹತ್ತಿರದ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಕೆಲಸಕ್ಕೆ ಹೋದ ಕಡೆ ಪತಿ ಪರಪುರುಷರೊಡನೆ ಮಾತನಾಡುವುದನ್ನು ಕಂಡು ಕೆರಳಿದ, ನಿನಗೆ ಬೇರೆಯವರ ಜೊತೆ ಅಕ್ರಮ ಸಂಬಂಧ ಇದೆಯಾ ಎಂದು ಪ್ರಶ್ನಿಸಿ ಪತ್ನಿಯ ಜೊತೆ ಜಗಳವಾಡುತ್ತಿದ್ದ.
ಇದೇ ವಿಚಾರವಾಗಿ ದಂಪತಿಯ ನಡುವೆ ಜಗಳ ನಡೆದಿದ್ದು ವಿಕೋಪಕ್ಕೆ ತಿರುಗಿದಾಗ ಸೋಮವಾರ ಮುಂಜಾನೆ 3 ರ ವೇಳೆ ಪರಶುರಾಮ ಪತ್ನಿಯ ಹೊಟ್ಟೆಗೆ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆಮಾಡಿ 108 ಆಂಬ್ಯುಲೆನ್ಸ್‌ಗೆ ಫೋನ್ ಮಾಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೂಯ್ಯಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದಳು. ಅದಾದ ಕೆಲವೇ ಕ್ಷಣದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಮಾಡಿದ ಪರಶುರಾಮ ಪತ್ನಿ ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿದ್ದ.
ಸ್ಥಳಕ್ಕೆ ಧಾವಿಸಿದ ಪೀಣ್ಯ ಪೊಲೀಸರು ಅನುಮಾನದ ಮೇಲೆ ಪರಶುರಾಮನನ್ನು ವಿಚಾರಣೆಗೊಳಪಡಿಸಿದಾಗ ಕೊಲೆಗೈದಿರುವ ವಿಷಯವನ್ನು ಬಾಯ್ಬಿಟ್ಟಿದ್ದಾನೆ ಎಂದು ಡಿಸಿಪಿ ಸುರೇಶ್ ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸಪ್ತಗಿರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications