''Caste Census: ಕಾಂಗ್ರೆಸ್ ಈ ಬುದ್ಧಿ ಯಾಕೆ ಬರಲಿಲ್ಲ?: ಸಿಎಂ ರಾಹುಲ್ ಗಾಂಧಿ ಪ್ರಶ್ನಿಸಲಿ''
ಬೆಂಗಳೂರು, ಮೇ 02: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಕ್ಕೆ ಒತ್ತಡದಿಂದ ಪ್ರಧಾನಿ ನರೇಂದ್ರ ಮೋದಿಯವರು ಜಾತಿಗಣತಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿನವರಿಗೆ ಜಾತಿಗಣತಿ ಮಾಡಬೇಕೆಂದು ಯಾಕೆ ಬುದ್ಧಿ ಬರಲಿಲ್ಲ ಎಂದು ಸಂಸದ ಪಿ.ಸಿ.ಮೋಹನ್ ಅವರು ಪ್ರಶ್ನೆ ಮಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ" ದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2013ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಾಡಿದ ಕ್ಯಾಬಿನೆಟ್ ನಿರ್ಣಯವನ್ನು ರಾಹುಲ್ ಗಾಂಧಿಯವರು ಹರಿದುಹಾಕಿದ್ದರು. ಇದು ನಾನ್‍ಸೆನ್ಸ್ ಎಂದಿದ್ದರು. 2004ರಿಂದ 2014ರವರೆಗೆ ಇದೇ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದರು. ನಿಮ್ಮ ನಾಯಕ ರಾಹುಲ್ ಗಾಂಧಿಯವರು ಯಾಕೆ ಜಾತಿಗಣತಿ ಮಾಡಿಸಲಿಲ್ಲ. ಈ ಬಗ್ಗೆ ರಾಹುಲ್ ಗಾಂಧಿಯವರನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಬೇಕು ಎಂದು ಆಗ್ರಹಿಸಿದರು.

ದಿಕ್ಕು ತಪ್ಪಿಸಬೇಡಿ: ಪಿಸಿ ಮೋಹನ್
ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಕೊಡುವುದು ಅಸಾಧ್ಯ ಎಂದು ತಿಳಿದಿದ್ದರೂ ಶೇಕಡಾ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ಕೊಡುವಂತೆ ಸಿದ್ದರಾಮಯ್ಯನವರು ಹೇಳಿದ್ದಾರೆ. ಈ ವಿಷಯದಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಶೇ.50ಕ್ಕಿಂತ ಹೆಚ್ಚು ಪ್ರಮಾಣ ಜಾತಿ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ಅವರು ಟೀಕಿಸಿದರು
ಸಚಿವ ಮುನಿಯಪ್ಪ ಅವರು ಮಾತನಾಡುವ ವೇಳೆ ರಾಜ್ಯದಲ್ಲಿ ಖರ್ಗೆಯವರು ಮುಖ್ಯಮಂತ್ರಿ ಆಗಬೇಕಿತ್ತು ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಯಾವತ್ತೂ ದಲಿತರಿಗೆ ಮೋಸ ಮಾಡಿದೆ ಎಂದು ಮುನಿಯಪ್ಪ ಅವರಿಗೆ ತಿಳಿಸಲು ಬಯಸುವುದಾಗಿ ಹೇಳಿದರು. 8 ಬಾರಿ ಸಂಸದರಾಗಿದ್ದ ಜಗಜೀವನರಾಂ ಅವರು ಪ್ರಧಾನಿ ಆಗುವುದು ತಪ್ಪಿತ್ತು ಅಂತಲೂ ತಿಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಹಲವು ಬಾರಿ ಗೆದ್ದ ಜಗಜೀವನರಾಂ ಅವರನ್ನು ಕಾಂಗ್ರೆಸ್ ಪ್ರಧಾನಿ ಏಕೆ ಮಾಡಲಿಲ್ಲ. ನೀವು ಮೋಸ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
550 ಕೋಟಿ ಹಣ ಸಾಕಾಗದು ಎಂದು ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಬಿಜೆಪಿ ಸರ್ಕಾರ ಜಾತಿಗಣತಿ ವಿಚಾರದಲ್ಲಿ ಬದ್ಧವಾಗಿದೆ. ಹೆಚ್ಚುವರಿ ಮೊತ್ತ ಬೇಕಾದಾಗ ಸರ್ಕಾರ ಅದನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಮೊನ್ನೆ ಜಾತಿ ಗಣತಿ ಜೊತೆಗೇ ಜಾತಿ ಗಣತಿ ಮಾಡಲು ನಿರ್ಧಾರ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಈ ದೇಶವನ್ನು 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಒಬಿಸಿ, ಎಸ್.ಸಿ, ಎಸ್‍ಟಿಗಳ ಜೊತೆ ನಾವಿದ್ದೇವೆ ಎನ್ನುತ್ತಲೇ ಬಂದಿತ್ತು. ಆದರೆ, ಇವತ್ತಿನವರೆಗೂ ಈ ಸಮುದಾಯಗಳಿಗೆ ನ್ಯಾಯ ಕೊಡುವುದರಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಮೋದಿಜೀ ಅವರ ಸರಕಾರದಲ್ಲಿ ಜಾತಿ ಗಣತಿ ನಡೆಯಲಿದ್ದು, ಜಾತಿವಾರು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಇದರಿಂದ ಎಸ್‌ಸಿ, ಎಸ್‌ಟಿ ಹಿಂದುಳಿದ ವರ್ಗಗಳಲ್ಲಿ ಯಾರಿಗೆ ಸರಕಾರದ ಸೌಲಭ್ಯ ಸಿಕ್ಕಿಲ್ಲವೋ ಅದನ್ನು ಕೊಡಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.












Click it and Unblock the Notifications