ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ: ಸಾಲುಗಟ್ಟಿ ನಿಂತ ಪ್ರಯಾಣಿಕರ ಪರದಾಟ
ಬೆಂಗಳೂರು, ಆಗಸ್ಟ್ 26: ಬೆಂಗಳೂರು ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಇತ್ತೀಚೆಗೆ ತಾಂತ್ರಿಕ ಲೋಕಪದೋಷಗಳು ಹೆಚ್ಚಾಗುತ್ತಿವೆ. ಮೇಲಿಂದ ಮೇಲೆ ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಸೋಮವಾರ ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಲ್ಲಿ ಕಾಲಿಡಲು ಜಾಗವೇ ಇರದಷ್ಟು ದಟ್ಟಣೆ ಕಂಡು ಬಂದಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲ್ವೆ ನಿಲ್ದಾಣದಲ್ಲಿ ದಿಢೀರನೇ ಉಂಟಾದ ತಾಂತ್ರಿಕ ಸಮಸ್ಯೆಗಳು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣವು ಕೆಎಸ್‌ಆರ್ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿನ ಸ್ಕೈವಾಕ್ ಮೇಲಿನಿಂದ ಹಿಡಿದು ಮೆಟ್ರೋ ಪ್ರವೇಶದ್ವಾರದ ವರೆಗೆ ಪ್ರಯಾಣಿಕರು ಸಾಲು ಸಾಲಾಗಿ ನಿಂತ ದೃಶ್ಯ ಬೆಳಗ್ಗೆ ಬೆಳಗ್ಗೆ 7:40 ಗಂಟೆಗೆ ಕಂಡು ಬಂದಿದೆ.

ಈ ಸಮಸ್ಯೆಯಿಂದಾಗಿ ಸಾರ್ವಜನಿಕರು ಮೆಟ್ರೋ ಪ್ರಯಾಣ ತುಸು ವಿಳಂಬವಾಯಿತು. ನಂತರ ಮೆಟ್ರೋ ಹತ್ತಲು ಸಹ ನೂಕು ನುಗ್ಗಲು ಕಂಡು ಬಂತು.
ಹಸಿರು ಮಾರ್ಗದಲ್ಲಿ ಉಂಟಾಗಿದ್ದ ಸಂಚಾರ ವ್ಯತ್ಯಯ
ಇನ್ನೂ ಇತ್ತೀಚೆಗೆ ನಮ್ಮ ಮೆಟ್ರೋ ಹಸಿರು ಮಾರ್ಗದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಶ್ರೀರಾಂಪುರ ನಿಲ್ದಾಣಗಳ ನಡುವೆ ರೈಲುಗಳು ಸಂಜೆ 16.11 ರಿಂದ 16.23 ಗಂಟೆಯವರೆಗೆ ವಿದ್ಯುತ್ ವೈಫಲ್ಯದಿಂದಾಗಿ ಸ್ಥಗಿತಗೊಂಡವು. ಇದರಿಂದಾಗಿ ಕೆಲ ಹೊತ್ತು ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ಸಮಸ್ಯೆ ಆಯಿತು ಎಂದು ಬಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅವಧಿಯಲ್ಲಿ ಹಸಿರು ಮಾರ್ಗದಲ್ಲಿ ಶಾರ್ಟ್ ಲೂಪ್ ಸೇವೆಗಳನ್ನು ನಡೆಸಲಾಯಿತು. ನಾಗಸಂದ್ರ ಮತ್ತು ರಾಜಾಜಿನಗರ ನಡುವೆ ಹಾಗೂ ನ್ಯಾಷನಲ್ ಕಾಲೇಜು ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಸಾರ್ಟ್ ಲೂಪ್ ಮೆಟ್ರೋ ಸೇವೆ ಆರಂಭಿಸಲಾಯಿತು.

ಎದುರಾದ ಸಮಸ್ಯೆ ನಿವಾರಣೆಗೊಳಿಸಿ ಮಧ್ಯಾಹ್ನ 16.23 ಗಂಟೆಯಿಂದ ಸಂಪೂರ್ಣ ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಆರಂಭಿಸಲಾಯಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಅತ್ಯಧಿಕ ಪ್ರಮಾಣಿಕರಿಗೆ ಕಡಿಮೆ ರೈಲುಗಳ ಸೇವೆ: ಸಮಸ್ಯೆ
ಬೆಂಗಳೂರಿನ ಮೆಟ್ರೋ ರೈಲುಗಳ ಸೇವೆಯಲ್ಲಿ ಇತ್ತೀಚೆಗೆ ವ್ಯತ್ಯಯ, ಜನದಟ್ಟಣೆ ಕಂಡು ಬರುತ್ತಿದೆ. ಕಾರಣ ಪ್ರಯಾಣಿಕರ ಮೆಟ್ರೋ ಅವಲಂಬನೆ ಹೆಚ್ಚಾಗಿದೆ. ಆದರೆ ಮೆಟ್ರೋ ಹೆಚ್ಚಿನ ರೈಲು ಬೋಗಿಗಳು ಲಭ್ಯವಿಲ್ಲ. ಚೀನಾದಿಂದ ಬರಬೇಕಿದ್ದ ಮೆಟ್ರೋ ರೈಲುಗಳು ಬಂದಿಲ್ಲ. ಹೀಗಾಗಿ ಇರುವ 50ಕ್ಕೂ ಹೆಚ್ಚು ಮೆಟ್ರೋ ರೈಲುಗಳೇ ದೈನಂದಿನ ಸುಮಾರು 09 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವುದೇ ಜನದಟ್ಟಣೆಗೆ ಕಾರಣವಾಗಿದೆ.
ಅಲ್ಲದೇ ಆಗಾಗ ರೈಲುಗಳಲ್ಲಿ, ವಿದ್ಯುತ್ ಪೂರೈಕೆಯಲ್ಲಿ ಒಂದಷ್ಟು ತೊಂದರೆಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಆತ್ಮಹತ್ಯೆ ಯತ್ನ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ. ಹೀಗಾಗಿ ಮೆಟ್ರೋ ಪ್ರಯಾಣಿಕರಿಗೆ ಆಗಾಗ ಸಂಚಾರದಲ್ಲಿ ತೊಂದರೆ ಆಗುತ್ತಿದೆ. ಆದಷ್ಟು ಬೇಗ ಒಪ್ಪಂದದಂತೆ ರೈಲುಗಳನ್ನು ತರಿಸಿಕೊಳ್ಳಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ...












Click it and Unblock the Notifications