Breaking News: ನಮ್ಮ ಮೆಟ್ರೋ ಹಳಿಗೆ ಜಿಗಿದ ವ್ಯಕ್ತಿ! ರೈಲು ಸಂಚಾರದಲ್ಲಿ ವ್ಯತ್ಯಯ...BMRCL
ಬೆಂಗಳೂರು, ಅಕ್ಟೋಬರ್ 04: ಬೆಂಗಳೂರು ನಮ್ಮ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ವೇಳೆ ಹಳಿ ಮೇಲೆ ಜಿಗಿಯುವ, ಆತ್ಮಹತ್ಯೆ ಪ್ರಯತ್ನದ ಘಟನೆಗಳು ನಿಂತಿಲ್ಲ. ಇಂದು (ಅಕ್ಟೋಬರ್ 04) ಸಹ ನಾಡಾಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮಾಧವಾರ ಕಡೆಗೆ ಹೋಗುವ ಹಸಿರು ಮಾರ್ಗದಲ್ಲಿ ಒಬ್ಬ ಪ್ರಯಾಣಿಕ ರೈಲಿನ ಹಳಿಗೆ ಜಿಗಿದ ಘಟನೆ ನಡೆದಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳೇ ಸ್ವತಃ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದಾಗಿ ವಿವಿಧ ಕಡೆಗೆ ಸಂಚರಿಸುವ ರೈಲುಗಳ ಸಂಚಾರದಲ್ಲಿ ಕೊಂಚ ವ್ಯತ್ಯಯವಾಯಿತು.
ಈ ಹಿಂದೆ ಅನ್ಯರಾಜ್ಯದ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಮುನ್ನ ಹಾಗೂ ನಂತರವು ಕೆಲವೆಡೆ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ವರದಿ ಆಗಿದ್ದವು. ಇದೀಗ ಅಂತದ್ದೆ ಮತ್ತೊಂದು ಘಟನೆ ಮಾದಾವರ ಮತ್ತು ರೇಷ್ಮೇ ಸಂಸ್ಥೆಯ ಹಸಿರು ಮಾರ್ಗದಲ್ಲಿ ನಡೆದಿದೆ.

ಇಂದು ಸಂಜೆ ಸುಮಾರು 15.17 ಗಂಟೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮಾದಾವರ ಕಡೆಗೆ ಹೋಗುವ ಹಸಿರು ಮಾರ್ಗದಲ್ಲಿ ಒಬ್ಬ ಪ್ರಯಾಣಿಕನು ರೈಲಿನ ಹಳಿಯ ಮುಂದೆ ಹಾರಿದ ಪರಿಣಾಮವಾಗಿ ಈ ಬಾಗದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಅದೃಷ್ಟವಶಾತ್ ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಆತನ ಜೀವ ಉಳಿದಿದೆ.
ಹಳಿಗೆ ಜಿಗಿದ ಸದರಿ ಪ್ರಯಾಣಿಕನನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಮಯದಲ್ಲಿ ರೇಷ್ಮೆ ಸಂಸ್ಥೆ ಮತ್ತು ನ್ಯಾಷನಲ್ ಕಾಲೇಜು ಮತ್ತು ರಾಜಾಜಿನಗರ ಮತ್ತು ಮಾದಾವರ ನಡುವೆ ಶಾರ್ಟ್ ಲೂಪ್ ಸೇವೆಯನ್ನು ನಡೆಸಲಾಯಿತು. ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರಯಾಣಿಕ ಹಳಿಗೆ ಜಿಗಿಯಲು ಕಾರಣವೇನು?
ಸದ್ಯ ಈ ಘಟನೆಯಲ್ಲಿ ಹಳಿಗೆ ಜಿಗಿದ ಪ್ರಯಾಣಿಕರ ಎಲ್ಲಿಯವರು, ಆಯತಪ್ಪಿ ಬಿದ್ದರಾ? ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೇ ಹಳಿ ಮೇಲೆ ಜಿಗಿದರಾ? ಎಂಬ ನಿಖರ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ.
ಈ ಹಿಂದೆ ಅತ್ತಿಗುಪ್ತೆ, ಜ್ಞಾನಭಾರತಿ ಮೆಟ್ರೋ ನಿಲ್ದಾಣ ಸೇರಿದಂತೆ ಪರ್ಪಲ್ ಹಾಗೂ ನೇರಳೆ ಮಾರ್ಗದಲ್ಲಿ ಮೆಟ್ರೋ ಹಳಿಗೆ ಜಿಗಿದ ಪ್ರಕರಣಗಳು ವರದಿ ಆಗಿದ್ದವು. ಮೊಬೈಲ್ ಬಿದ್ದಿದ್ದನ್ನು ಎತ್ತಿಕೊಳ್ಳಲು ಹಳಿಗೆ ಇಳಿದ ಘಟನೆಗಳು ಇದರಲ್ಲಿವೆ. ಈವರೆಗೆ ಮೆಟ್ರೋ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದವು ಸೂಸೈಡ್ ಪ್ರಯತ್ನವಾಗಿದೆ. ಒಂದೆರಡು ಪ್ರಕರಣಗಳಲ್ಲಿ ಭದ್ರತಾ ಸಿಬ್ಬಂದಿಯಿಂದ ಆಗಬೇಕಿದ್ದ ಸಂಭಾವ್ಯ ಅನಾಹುತ ತಪ್ಪಿದೆ. ವ್ಯಕ್ತಿಗಳು ಮೆಟ್ರೋ ಹಳಿ ಮೇಲೆ ಕಾಣುತ್ತಿದ್ದಂತೆ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿದ್ದರು. ಈ ಬಾರಿಯ ಘಟನೆಯಲ್ಲೂ ಸಹ ಹಳಿಗೆ ಜಿಗಿದ ವ್ಯಕ್ತಿ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications