ಬೆಂಗಳೂರು ಪಾರ್ಕಿಂಗ್ ನೀತಿ 2.0ಗೆ ಸರ್ಕಾರ ಹಸಿರು ನಿಶಾನೆ: ಶೀಘ್ರದಲ್ಲೇ ದರ ನಿಗದಿ
ಬೆಂಗಳೂರು, ಆಗಸ್ಟ್ 30: ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಬೆಂಗಳೂರು ಪಾರ್ಕಿಂಗ್ ನೀತಿ 2.0 ಗೆ ಹಸಿರು ನಿಶಾನೆ ಸಿಕ್ಕಿದೆ. ಈ ಮೂಲಕ ಇನ್ನು ಮುಂದೆ ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ ಇತರ ಭಾಗಗಳಲ್ಲಿ ಕೂಡ ರಸ್ತೆ ಬದಿ ತಮ್ಮ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಬಿಬಿಎಂಪಿಯು ಪಾರ್ಕಿಂಗ್ ದರವನ್ನು ನಿಗದಿಪಡಿಸಿ ನಂತರ ಟೆಂಡರ್ ಕರೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರ ಭೂ ಸಾರಿಗೆ ನಿರ್ದೇಶನಾಲಯ ಪ್ರಸ್ತಾಪಿಸಿದ ಶುಲ್ಕವು ಸ್ಥಳವನ್ನು ಆಧರಿಸಿ ಗಂಟೆಗೆ 25 ರುಪಾಯಿಗಳಿಂದ 75 ರುಪಾಯಿಗಳವರೆಗೆ ಇರಲಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಮತ್ತು ವಾಹನ ಮಾಲೀಕರಲ್ಲಿ ಶಿಸ್ತು ತರಲು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಳ ಮಾಡುತ್ತಿರುವುದಾಗಿ ತಿಳಿಸಲಾಗಿದೆ.
ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸ್ವಂತ ವಾಹನಗಳ ಬಳಕೆಗೆ ಕಡಿವಾಣ ಹಾಕುವುದು ಮತ್ತು ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪಾರ್ಕಿಂಗ್ ಶುಲ್ಕದಲ್ಲಿ ಏರಿಕೆ ಮಾಡಿರುವುದಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯ ಕಾರಣ ನೀಡಿದೆ.

ಎರಡು ವರ್ಷಗಳ ಮೊದಲೇ ಸಮಗ್ರ ಅಧ್ಯಯನ
ನಗರಕ್ಕೆ ಹೊಸ ಮತ್ತು ಖಾಸಗಿಯವರ ಒಳಹರಿವು ತಡೆಯಲು ಎರಡು ವರ್ಷಗಳ ಹಿಂದೆಯೇ ನಗರ ಭೂ ಸಾರಿಗೆ ನಿರ್ದೇಶನಾಲಯ ಸಮಗ್ರ ಅಧ್ಯಯನ ವರದಿಯನ್ನು ಸಿದ್ಧಪಡಿಸಿತ್ತು.
ಹೊಸ ಪಾರ್ಕಿಂಗ್ ನೀತಿಯನ್ನು ಬಿಬಿಎಂಪಿ, ಡಿಯುಎಲ್‌ಟಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ. ಇನ್ನುಮುಂದೆ ನಗರದಲ್ಲಿ ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಶುಲ್ಕ ವಸೂಲಿ ಮಾಡಲಾಗುತ್ತದೆ.

ಹಲವು ರಸ್ತೆಗಳಲ್ಲಿ ಶುಲ್ಕ ವಸೂಲಿ
ಈ ಮೊದಲು ನಗರದ ಪ್ರತಿಷ್ಠಿತ ರಸ್ತೆಗಳಾದ ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ ಸೇರಿದಂತೆ ಹತ್ತು ಕಡೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಯಲ್ಲಿತ್ತು.
ನಗರದ ಐಷಾರಾಮಿ ಪ್ರದೇಶಗಳಾದ ಇಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಲು ವಾಹನ ನಿಲ್ಲಿಸಲು ಬಿಬಿಎಂಪಿ ಪಾರ್ಕಿಂಗ್ ಶುಲ್ಕ ನಿಗದಿಪಡಿಸಿತ್ತು. ಈಗ ಕೇಂದ್ರ ವ್ಯಾಪಾರ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

ನಗರದ 85 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ
ಈ ಹಿಂದೆ ಬಿಬಿಎಂಪಿ 85 ರಸ್ತೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿತ್ತು ಮತ್ತು ಹೊಸ ಪಾರ್ಕಿಂಗ್ ನೀತಿಗೆ ಸರ್ಕಾರ ಒಪ್ಪಿಗೆ ನೀಡುವುದರೊಂದಿಗೆ ಪಾಲಿಕೆಯು ಈಗ ಇನ್ನೂ ಹೆಚ್ಚಿನ ರಸ್ತೆಗಳನ್ನು ಗುರುತಿಸಿ ಅವುಗಳನ್ನು ಪಾರ್ಕಿಂಗ್ ಶುಲ್ಕ ವ್ಯವಸ್ಥೆಯ ಅಡಿಯಲ್ಲಿ ತರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲು ನಿರ್ಧರಿಸಿದೆ.
ಹೊಸ ನೀತಿಯ ಉದ್ದೇಶವು ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಮತ್ತು ನಗರದ ಎಂಟು ವಲಯಗಳಲ್ಲಿ ಸರ್ಕಾರಿ ಚಾಲಿತ ಪಾರ್ಕಿಂಗ್ ಪೂರೈಕೆಯಿಂದ ಮಾರುಕಟ್ಟೆ ಚಾಲಿತ ಪಾರ್ಕಿಂಗ್ ಪೂರೈಕೆ ಮತ್ತು ನಿರ್ವಹಣೆಗೆ ಹೋಗುವುದು.

ಮಿತಿ ಮೀರಿದ ಟ್ರಾಫಿಕ್‌ಗೆ ಬೀಳುತ್ತಾ ಕಡಿವಾಣ
ಸದ್ಯ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ಜನ ಈಗಾಗಲೇ ಟ್ರಾಫಿಕ್ ಕಿರಿಕಿರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಶುಲ್ಕ ವಿಧಿಸುವ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ನಗರ ಭೂ ಸಾರಿಗೆ ನಿರ್ದೇಶನಾಲಯವೇನೋ ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕುವುದು, ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವ ಉದ್ದೇಶ ಎಂದು ಹೇಳಿದೆ. ಉದ್ದೇಶ ಒಳ್ಳಯದಾದರು, ನಗರದ ಎಲ್ಲಾ ಭಾಗಗಳಿಗೆ ಸಾರ್ವಜನಿಕ ಸಾರಿಗೆ ಸಮರ್ಪಕವಾಗಿದೆಯಾ?, ಎಲ್ಲಾ ಸಮಯಗಳಲ್ಲೂ ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿ ಕೂರಲು ಆಗುತ್ತಾ ಎನ್ನುವ ಪ್ರಶ್ನೆಗಳು ಎದುರಾಗಿವೆ.












Click it and Unblock the Notifications