ಪರಮೇಶ್ವರ್ ಸಂಪುಟ ಸೇರುವ ಹಾದಿ ಸುಗಮ!
ಬೆಂಗಳೂರು, ಸೆ.27 : ಮುಮ್ತಾಜ್ ಅಲಿಖಾನ್ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಯ್ಕೆಯಾಗುತ್ತಾರೆ ಎಂಬ ಮಾತುಗಳ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ. ಈ ಮೂಲಕ ಪರಮೇಶ್ವರ್ ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿದ್ದ ಮುಮ್ತಾಜ್ ಅಲಿ ಖಾನ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಸದ್ಯ ತೆರವಾಗಿರುವ ಸ್ಥಾನಕ್ಕೆ ಹೊಸ ಸದಸ್ಯರನ್ನು ನೇಮಕ ಮಾಡುವ ಹೊಣೆ ಸರ್ಕಾರದ ಮೇಲಿದೆ.

ಪಕ್ಷದ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಿ, ಪರಮೇಶ್ವರ್ ವಿಧಾನಪರಿಷತ್ ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಸಿದ್ದರಾಮಯ್ಯ ಸಂಪುಟ ಸೇರುವ ಕೆಲಸವನ್ನು ಸುಲಭಗೊಳಿಸಿಕೊಳ್ಳಲು ಪರಮೇಶ್ವರ್ ನಿರ್ಧರಿಸಿದ್ದಾರೆ.
ವಿಧಾನಪರಿಷತ್ ಪ್ರವೇಶಿಸುವ ಸಲುವಾಗಿಯೇ ಪರಮೇಶ್ವರ್ ಕಾಲೇಜಿನಲ್ಲಿ ತಮಗೆ ಪಾಠ ಹೇಳಿಕೊಟ್ಟಿದ್ದ ಗುರುಗಳಾದ ಮುಮ್ತಾಜ್ ಅಲಿ ಖಾನ್ ಅವರಿಂದ ಅವಧಿಗೆ ಮುನ್ನವೇ ರಾಜೀನಾಮೆ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಮನಿರ್ದೇಶಿತ ಸದಸ್ಯರಾದ ಮುಮ್ತಾಜ್ ಅವರ ಇನ್ನೂ 9 ತಿಂಗಳು ಬಾಕಿ ಇತ್ತು. ಇಂತಹ ಹೊತ್ತಿನಲ್ಲೇ ಅವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದರ ಹಿಂದೆ ಪರಮೇಶ್ವರ್ ತಂತ್ರಗಾರಿಕೆ ಕೆಲಸ ಮಾಡಿದೆ ಎಂಬುದು ಸದ್ಯದ ಸುದ್ದಿ.
ಜೂನ್ ವರೆಗೆ ಕಾಯಬೇಕಿತ್ತು : ಪರಮೇಶ್ವರ್ ಸಂಪುಟ ಸೇರಬೇಕಾದರೆ ವಿಧಾನಪರಿಷತ್ ಸದಸ್ಯರಾಗಬೇಕು. ಜೂನ್ ನಲ್ಲಿ ವಿಧಾನಪರಿಷತ್ತಿನ 14 ಸ್ಥಾನಗಳಿಗೆ ಚುಣಾವಣೆ ನಡೆಯಲಿದೆ. ಅಲ್ಲಿಯವರೆಗೂ ಅವರು ಪರಿಷತ್ ಪ್ರವೇಶಿಸುವುದು ಸಾಧ್ಯವಿರಲಿಲ್ಲ.
ಆದ್ದರಿಂದ ಮುಮ್ತಾಜ್ ಅಲಿಖಾನ್ ಮನವೊಲಿಸಿರುವ ಪರಮೇಶ್ವರ್ ಅವರಿಂದ ರಾಜೀನಾಮೆ ಕೊಡಿಸಿ, ಪಕ್ಷಕ್ಕೆ ಬರಮಾಡಿಕೊಂಡು ಅವರ ಸ್ಥಾನಕ್ಕೆ ಹೋಗಲು ತಯಾರಿ ನಡೆಸಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಹಬ್ಬಿದೆ.
ಸಿದ್ದರಾಮಯ್ಯ ಸಂಪುಟ ಸೇರಬೇಕು ಎಂಬುದು ಪರಮೇಶ್ವರ್ ಹಲವು ದಿನಗಳ ಕನಸು. ಅದನ್ನು ಅವರು ಬಹಿರಂಗವಾಗಿಯೂ ಹೇಳಿದ್ದಾರೆ. ಮೊದಲು ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಸದ್ಯ ಸಚಿವರಾಗಲು ಬಯಸಿದ್ದಾರೆ.












Click it and Unblock the Notifications