ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಪರಂ ಮುಂದುವರಿಕೆಗೆ ಹೈಕಮಾಂಡ್ ಒಲವು
ಬೆಂಗಳೂರು, ಮೇ 29: ಡಾ.ಜಿ.ಪರಮೇಶ್ವರ್ ರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈ ಕಮಾಂಡ್ ನಿರ್ಧರಿಸಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗ ಅನಗತ್ಯವಾದ ಸಮಸ್ಯೆ ಎಳೆದುಕೊಂಡಂತಾಗಿದೆ ಎಂಬ ಲೆಕ್ಕಾಚಾರದಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಿಂದ ಕೆಪಿಸಿಸಿ ಅದ್ಯಕ್ಷ ಗಾದಿಗಾಗಿ ಭಾರೀ ಲಾಬಿ ನಡೆದಿತ್ತು. ಸಚಿವ ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಹಾಗೂ ಎಸ್ ಆರ್ ಪಾಟೀಲ್ ಹೆಸರು ಅಧ್ಯಕ್ಷ ಗಾದಿಗೆ ಕೇಳಿಬಂದಿತ್ತು. ಇನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಕಾಂಗ್ರೆಸ್ ಶಾಸಕರು, ವಿವಿಧ ಮುಖಂಡರು ಅಭಿಪ್ರಾಯವನ್ನು ಸಂಗ್ರಹಿಸಿದ್ದರು.[ಕೋರ್ ಕಮಿಟಿ ಸಭೆ ಬಳಿಕೆ ಕೆಪಿಸಿಸಿ ಅಧ್ಯಕ್ಷರ ಹೆಸರು ಘೋಷಣೆ?]

ಆದರೂ ಅಧ್ಯಕ್ಷರ ಆಯ್ಕೆ ಅಂತಿಮ ತೀರ್ಮಾನ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ವೇಣುಗೋಪಾಲ್ ಹೇಳಿದ್ದರು. ಅಂದಹಾಗೆ, ಪರಮೇಶ್ವರ್ ಅವರಿಗೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈ ಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ. ಅಂತೂ ಒಂದು-ಒಂದೂವರೆ ತಿಂಗಳಿಂದ ನಡೆಯುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಕಸರತ್ತಿಗೆ ಅಂತಿಮ ತೆರೆ ಬಿದ್ದಂತಾಗಿದೆ.












Click it and Unblock the Notifications