ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಿದ್ದರಾಮಯ್ಯ ಕಿಡಿ

ಬೆಂಗಳೂರು, ಫೆಬ್ರವರಿ 14: ಇಂದಿನಿಂದ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ವಿಧಾನಮಂಡಲ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಬಲ್ ಎಂಜಿನ್ ಸರ್ಕಾರ ನಾಡಿಗೆ ಡಬಲ್ ದ್ರೋಹ ಎಸಗಿದೆ. ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದೆ. ಸರ್ಕಾರ ರಾಜ್ಯಪಾಲರ ದಿಕ್ಕು ತಪ್ಪಿಸಿ ರಾಜ್ಯಪಾಲರ ಮಾತಿನ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿದೆ. ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಪ್ರಸ್ತಾಪವೇ ಇಲ್ಲ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಕ್ಕೆ ಯಾವುದೇ ಗೊತ್ತು-ಗುರಿಗಳಿಲ್ಲ

ಯಾವುದೇ ನಾಗರಿಕ ಸರ್ಕಾರಕ್ಕೆ ನಿರ್ದಿಷ್ಟವಾದ ಗೊತ್ತು- ಗುರಿಗಳಿರುತ್ತವೆ. ಆದರೆ, ರಾಜ್ಯಪಾಲರ ಭಾಷಣ ಕೇಳಿದ ಮೇಲೆ, ಈ ಸರ್ಕಾರಕ್ಕೆ ಯಾವುದೇ ಗೊತ್ತು-ಗುರಿಗಳಿಲ್ಲ ಎಂದು ಸ್ಪಷ್ಟವಾಗುತ್ತದೆ. ಸರ್ಕಾಗಳಿಗೆ ತನ್ನದೇ ಆದ ಆದ್ಯತೆಗಳಿರುತ್ತವೆ. ಆದ್ಯತೆಗಳಲ್ಲಿ ಮುಖ್ಯವಾಗಿ, ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ಕೊಡುವುದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ಕೊಡುವುದು ಆಗಿರುತ್ತದೆ. ಸರ್ಕಾರ ಸಂಪೂರ್ಣವಾಗಿ ಇವೆರಡನ್ನೂ ಮರೆತಿದೆ ಎಂದು ಸ್ಪಷ್ಟವಾಗುತ್ತಿದೆ. ರಾಜ್ಯದ ಜನರಿಗೆ ಕಲ್ಯಾಣವೂ ಇಲ್ಲ. ಅಭಿವೃದ್ಧಿಯ ಮಾತೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Opposition Leader Siddaramaiah Reaction on Governor Speech in Legislature Joint Session

ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯಪಾಲರ ಭಾಷಣದಲ್ಲಿ 116 ಪ್ಯಾರಾಗಳಿವೆ. ಅದರಲ್ಲಿ ೨೩ ಪ್ಯಾರಾಗಳು ಕೋವಿಡ್ ಮತ್ತು ಪ್ರವಾಹಕ್ಕೆ ಸಂಬಂಧಪಟ್ಟಿವೆ. ಇನ್ನುಳಿದಂತೆ ಸುಮಾರು 30 ಪ್ಯಾರಾಗಳು ಹಳೆಯ ಭರವಸೆಗಳಾಗಿವೆ ಹಾಗೂ ನಮ್ಮ ಸರ್ಕಾರದ ಸಾಧನೆಗಳೂ ಇವೆ. ಕೆಲವಕ್ಕೆ ಹೆಸರು ಬದಲಾಯಿಸಲಾಗಿದೆ ಎಂದರು.

ರಾಜ್ಯಪಾಲರ ಭಾಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು, ರೈತರು, ಕುಶಲಕರ್ಮಿಗಳು, ಸಣ್ಣ, ಮಧ್ಯಮ, ಸೂಕ್ಷ್ಮ ಕೈಗಾರಿಕೆಗಳನ್ನು ನಡೆಸುವವರು, ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರಿಗೆ ಈ ಸರ್ಕಾರ ಏನನ್ನೂ ಮಾಡಿಲ್ಲ ಎಂಬುದನ್ನು ಒಪ್ಪಿಕೊಂಡಿರುವುದು ರಾಜ್ಯಪಾಲರ ಭಾಷಣದಿಂದ ಅರ್ಥವಾಗುತ್ತದೆ.

ರಾಜ್ಯದಲ್ಲಿ ನಿರುದ್ಯೋಗ ತಾಂಡವ

ರಾಜ್ಯದಲ್ಲಿ ನಿರುದ್ಯೋಗ ತಾಂಡವ ಆಡುತ್ತಿದೆ. ಆದರೆ, ನಿರುದ್ಯೋಗವನ್ನು ಪರಿಹರಿಸಲು ಏನನ್ನೂ ಮಾಡಿಲ್ಲ ಎಂಬುದನ್ನು ಸರ್ಕಾರವೇ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ ಎನ್ನುವುದು ರಾಜ್ಯಪಾಲರ ಭಾಷಣದ ಮೂಲಕ ಸ್ಪಷ್ಟವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

Opposition Leader Siddaramaiah Reaction on Governor Speech in Legislature Joint Session

ಕಲ್ಯಾಣ ಕರ್ನಾಟಕ ಮಂಡಳಿಗೆ ಸಂಬಂಧಪಟ್ಟ ಹಾಗೆ ಹೆಸರು ಬದಲಾಯಿಸಿದ್ದು, ಕಚೇರಿ ಸ್ಥಳಾಂತರಿಸಿದ್ದನ್ನೇ ಸಾಧನೆ ಎಂದು ಹೇಳಿಕೊಂಡಿದೆ. ನೀರಾವರಿ ಯೋಜನೆಗಳಿಗೆ ಏನನ್ನೂ ಕೊಟ್ಟಿಲ್ಲ ಎನ್ನುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಉದಾಹರಣೆಗೆ ಗ್ರಾಮ ಒನ್ ಬಗ್ಗೆ ಭರ್ಜರಿ ಪ್ರಚಾರ ತೆಗೆದುಕೊಳ್ಳುತ್ತಿದೆ. ರಾಜ್ಯಪಾಲರ ಬಾಯಲ್ಲೂ ಹೇಳಿಸಿದೆ. ಆದರೆ, ಈ ಯೋಜನೆ ನಮ್ಮ ಸರ್ಕಾರದ ಬಾಪೂಜಿ ಸೇವಾ ಕೇಂದ್ರಗಳ ನಕಲಾಗಿದೆ ಎಂದು ತಿಳಿಸಿದರು.

ಅಮೃತ ಗ್ರಾಮ ಪಂಚಾಯತಿ ಯೋಜನೆ ಅಡಿ ಗ್ರಾಮ ಪಂಚಾಯತಿಗಳಿಗೆ ೨೫ ಲಕ್ಷ ರೂ. ಕೊಡುವುದನ್ನೇ ಸರ್ಕಾರ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ನಮ್ಮ ಸರಕಾರ ಇದ್ದಾಗ ಸಾವಿರ ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿದ್ದೆವು ಎಂದರು.

ಸರ್ಕಾರದ ನಿರ್ಲಕ್ಷ್ಯದಿಂದಲೇ ಲಕ್ಷಾಂತರ ಜನರ ಮರಣ

ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಲೇ ಲಕ್ಷಾಂತರ ಜನ ಮರಣ ಹೊಂದಿದರು. ಸರಿಯಾಗಿ ಆಕ್ಸಿಜನ್ ವ್ಯವಸ್ಥೆ, ಬೆಡ್‌ಗಳು, ಔಷಧಿ, ಆ್ಯಂಬುಲೆನ್ಸ್, ಆಸ್ಪತ್ರೆ, ವೈದ್ಯರು, ದಾದಿಯರು ಇತ್ಯಾದಿ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ಜನರನ್ನು ಬೀದಿ ಬೀದಿಯಲ್ಲಿ ಕೊಂದು ಹಾಕಿದರು. ಅದಕ್ಕೆ ಒಂದು ಸಣ್ಣ ಪಶ್ಚಾತ್ತಾಪವೂ ಇಲ್ಲ ಎಂದು ಕಿಡಿಕಾರಿದರು.

ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಅವರು ಸಾಯುವಂತೆ ಮಾಡಿದ್ದನ್ನೇ ಸಾಧನೆ ಎಂದು ಹೇಳುವುದಾದರೆ ಮರಣ ಹೊಂದಿದ ನಾಲ್ಕು ಲಕ್ಷ ಆತ್ಮಗಳಿಗೆ ಏನನ್ನಿಸಬೇಡ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ತಂದೆ- ತಾಯಿಯರನ್ನು, ದುಡಿಯುವ ಮಕ್ಕಳನ್ನು, ಗಂಡ ಹೆಂಡತಿಯರನ್ನು ಕಳೆದುಕೊಂಡು ಅನಾಥರಾಗಿರುವ ಕುಟುಂಬದ ಸದಸ್ಯರುಗಳಿಗೆ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಅವಮಾನ ಮಾಡಿದೆ. ಏಕೆಂದರೆ, ವರ್ಗಗಳಿಗೆ ಸಂಬಂಧಪಟ್ಟ ಯಾವುದೊಂದು ಕಾರ್ಯಕ್ರಮವೂ, ಯಾವುದೇ ಮಾಹಿತಿ ಈ ಭಾಷಣದಲ್ಲಿ ಇಲ್ಲವೆಂದರು.

ರಾಜ್ಯಪಾಲರ ಭಾಷಣದಲ್ಲಿ ಸಾಧನೆಗಳಿಗಿಂತ ಬಹುತೇಕ ಭರವಸೆಗಳೇ ಇವೆ. 116 ಪ್ಯಾರಾಗಳಲ್ಲಿ ಹಲವಾರು ಸುಳ್ಳುಗಳನ್ನು ರಾಜ್ಯಪಾಲರ ಮೂಲಕ ಹೇಳಿಸಲಾಗಿದೆ. ನಮ್ಮ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆ ಎಂದು ಈ ಸರ್ಕಾರ ಹೇಳಿಕೊಳ್ಳುತ್ತಿದೆ.

ಸರ್ಕಾರ ವೈಫಲ್ಯಗಳಿಂದ ಕೂಡಿದೆ
ಪತ್ರಕರ್ತರಿಗೆ ಮಾನ್ಯತೆ ಪತ್ರ ಹಾಗೂ ಬಸ್ ಪಾಸ್ ಸೌಲಭ್ಯವನ್ನು ಈ ಹಿಂದಿನಿಂದಲೂ ಒದಗಿಸಲಾಗುತ್ತಿದೆ. ಆದರೂ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಇದು ತನ್ನ ಸಾಧನೆ ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರ ಅತ್ಯಂತ ನಿಷ್ಕ್ರಿಯವಾಗಿದ್ದು, ವೈಫಲ್ಯಗಳಿಂದ ಕೂಡಿದೆ. ಜನರಿಗಾಗಿ ಏನೂ ಮಾಡುತ್ತಿಲ್ಲ ಎಂಬುದು ರಾಜ್ಯಪಾಲರ ಭಾಷಣದಿಂದ ಸ್ಪಷ್ಟವಾಗಿದೆ. ನಾನು ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಇಷ್ಟೊಂದು ಕೆಟ್ಟದಾದ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು, ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಅರ್ಥವಾಗಿದೆ.

ಇಂದು ರೈತರಾದಿಯಾಗಿ ಸಮಸ್ತ ದುಡಿಯುವ ಜನ, ಸಮಸ್ತ ದಲಿತ ಮತ್ತು ಮಹಿಳಾ ಸಮುದಾಯ ಎಲ್ಲರೂ ಭೀಕರ ಸಂಕಷ್ಟದಲ್ಲಿದ್ದಾರೆ ಎಂಬುದು ಈ ಸರ್ಕಾರಕ್ಕೆ ಇನ್ನೂ ಮನದಟ್ಟಾಗಿಲ್ಲ. ಅಥವಾ ಉದ್ದೇಶ ಪೂರ್ವಕವಾಗಿಯೇ ಈ ವರ್ಗಗಳನ್ನು ಸರ್ಕಾರ ದಮನ ಮಾಡುತ್ತಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+