'ಬೆಂಗಳೂರಿನ 6,000 ಗುಂಡಿ ಮುಚ್ತೀವಿ ಅಂತ ಡಿಕೆಶಿಗೆ ಬಿಬಿಎಂಪಿ ಟೋಪಿ..'
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗುಂಡಿಗಳೆಲ್ಲ ಬಾಯ್ತೆರೆದುಕೊಂಡಿವೆ. ಈ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ವಿಪಕ್ಷ ನಾಯಕ ಆರ್.ಅಶೋಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಹಿಂದೆ ಬೆಂಗಳೂರಿನ 6,000 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದರು. ಈ ವಿಚಾರವಾಗಿ ಅವರನ್ನು ವ್ಯಂಗ್ಯ ಕೂಡ ಮಾಡಿದ್ದಾರೆ. ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೇ.. ಬೆಂಗಳೂರಿನಲ್ಲಿ 6,000 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಾವು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಂಡು ಇನ್ನೂ ಸರಿಯಾಗಿ ಒಂದು ತಿಂಗಳೂ ಕಳೆದಿಲ್ಲ ಎಂದು ಕುಟುಕಿದ್ದಾರೆ.

ಆದರೆ ಇವತ್ತು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅರ್ಥವಾಗದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ? ಎಂದು ಅಶೋಕ್ ಕೇಳಿದ್ದಾರೆ.
6,000 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಅಂತ ಹೇಳಿದ್ದು ನಿಜವಾ ಅಥವಾ ಹಸಿ ಸುಳ್ಳಾ? ಅಥವಾ 6,000 ರಸ್ತೆ ಗುಂಡಿ ಮುಚಿದ್ದೇವೆ ಎಂದು ಒಂದೆರಡು ಫೋಟೋ, ವಿಡಿಯೋ ಕಳಿಸಿ ಅಮೆರಿಕದಲ್ಲಿದ್ದ ತಮಗೆ ಅಧಿಕಾರಿಗಳು ಟೋಪಿ ಹಾಕಿದ್ದಾರಾ? ಎಂದು ಬಿಬಿಎಂಪಿ ಅಧಿಕಾರಿಗಳ ಬಗ್ಗೆಯೂ ಲೇವಡಿ ಮಾಡಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿ ಮಾಡಿ ಕಮಿಷನ್ ಹೊಡೆದು ಜನರ ಹಣ ಲಪಾಟಾಯಿಸಿದ್ದೀರಾ? ಅಥವಾ ರಸ್ತೆಗುಂಡಿ ಮುಚ್ಚಿದ್ದ ಕಾಮಗಾರಿ ಒಂದೇ ತಿಂಗಳಲ್ಲಿ ಕಿತ್ತು ಹೋಗುವಷ್ಟು ಕಳಪೆ ಕಾಮಗಾರಿ ಆಗಿತ್ತಾ? ಉತ್ತರ ಕೊಡಿ ಉಪಮುಖ್ಯಮಂತ್ರಿಗಳೇ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಇನ್ನೆಷ್ಟು ಬಂಡಲ್ ಬಿಡುತ್ತೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ರಾಜಕಾರಣ ಮಾಡುತ್ತಲೇ ಕಾಲಹರಣ ಮಾಡುತ್ತಾರೋ ಅಥವಾ ಇನ್ನಾದರೂ ಬೆಂಗಳೂರು ಅಭಿವೃದ್ಧಿ ಮಂತ್ರಿ ನಾನೇ ಎಂದು ನೆನಪಿಸಿಕೊಂಡು ನಗರದ ಅವಸ್ಥೆ ಕಡೆ ಗಮನ ಹರಿಸುತ್ತಾರೋ? ಎಂದು ಕಾಲೆಳೆದಿದ್ದಾರೆ.
ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟಾ ಎಂಬಂತೆ ಬೆಂಗಳೂರಿನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ಮಾಧ್ಯಮಗಳ ಮೇಲೆ ಹರಿಹಾಯುತ್ತಾರೋ, ಅಥವಾ ತಮ್ಮ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳುತ್ತಾರೋ? ಎಂದು ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಾರ್ಡನ್ ಸಿಟಿ, ಗ್ರೀನ್, ಸಿಟಿ, ಐಟಿ ಸಿಟಿ, ಸ್ಟಾರ್ಟಪ್ ಸಿಟಿ, ಸಿಲಿಕಾನ್ ಸಿಟಿ ಎಂದು ಖ್ಯಾತಿ ಹೊಂದಿದ್ದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು, ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿಯಿಂದ ರಸ್ತೆ ಗುಂಡಿಗಳ ನಗರ, ವಾಟರ್ ಫಾಲ್ಸ್ ನಗರ ಎಂದು ನಗೆಪಾಟಲಿಗೆ ಈಡಾಗಿದೆ. ಬೆಂಗಳೂರಿಗೆ ಈ ಕುಖ್ಯಾತಿ ತಂದುಕೊಡಲು ಡಿ.ಕೆ.ಶಿವಕುಮಾರ್ ಅವರು ಕಳೆದೊಂದು ವರ್ಷದಿಂದ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಇಷ್ಟಕ್ಕೂ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ? ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ನೀಡಿಲ್ಲ. ಬೆಂಗಳೂರಿನ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು ನೋವುಗಳು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications