ನಂದಿಬೆಟ್ಟದ ಅತಿಥಿಗೃಹವನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿ
ಬೆಂಗಳೂರು, ಆ.9 : ನ೦ದಿ ಬೆಟ್ಟದಲ್ಲಿ ವಸತಿ ಸಮಸ್ಯೆ ನಿವಾರಿಸಲು ತೋಟಗಾರಿಕಾ ಇಲಾಖೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿದೆ ಎಂದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಅತಿಥಿ ಗೃಹವನ್ನು ನೀವು ಈಗ ಆನ್ ಲೈನ್ ಮೂಲಕ ಕಾಯ್ದಿರಿಸಬಹುದಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಸಚಿವ ಶಾಮನೂರು ಶಿವಶಂಕರಪ್ಪ ನಂದಿಗಿರಿಧಾಮದಲ್ಲಿ ಅತಿಥಿಗೇಹ ಕಾಯ್ದಿರಿಸುವಿಕೆಗೆ ಈಗ ಆನ್ ಲೈನ್ ವ್ಯವಸ್ಥೆ ಆಳವಡಿಸಲಾಗಿದೆ ಎಂದು ಹೇಳಿದರು. ನಂದಿಬೆಟ್ಟದಲ್ಲಿ ಉಂಟಾಗುತ್ತಿದ್ದ ವಸತಿ ಸಮಸ್ಯೆಯನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರು http://nandihillsreservations.in/ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಅತಿಥಿಗೃಹವನ್ನು ಕಾಯ್ದಿರಿಸಬಹುದಾಗಿದೆ. ಅತಿಥಿ ಗೃಹದ ದರ, ವ್ಯವಸ್ಥೆ ಕುರಿತ ಎಲ್ಲಾ ಮಾಹಿತಿ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ಸಚಿವರು ತಿಳಿಸಿದರು.
ದರ ಪಟ್ಟಿ ಹೀಗಿದೆ : ನಂದಿಬೆಟ್ಟದ ಅತಿಥಿ ಗೃಹದ ದರ ಪಟ್ಟಿಗಳ ವಿವರ ಈ ರೀತಿ ಇದೆ. ತೆರಿಗೆ ಹೊರತು ಪಡಿಸಿ ಒಂದು ದಿನದ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿವಿಐಪಿ ಕೊಠಡಿ -1,500, ವಿಐಪಿ ಕುಟೀರ - 1000, ಕೊಠಡಿ - 750, ಒಂದು ವಿವಿಐಪಿ ಸಭಾಂಗಣ -500 ರೂ. ಹಾಗೂ ಒಂದು ವಿಐಪಿ ಡೈನಿಂಗ್ ಹಾಲ್ 900 ರೂ. [ಉಳಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
ಕರ್ನಾಟಕದ ಪ್ರಖ್ಯಾತ ಗಿರಿಧಾಮಗಳಲ್ಲಿ ಒಂದಾಗಿರು ನಂದಿಬೆಟ್ಟ ಸಮುದ್ರ ಮಟ್ಟದಿಂದ 4850 ಅಡಿಗಳ ಮೇಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟಕ್ಕೆ ಚಿಕ್ಕಬಳ್ಳಾಪುರ ಪಟ್ಟಣದಿ೦ದ 10 ಕಿ.ಮೀ ಸಾಗಬೇಕು. ಬೆ೦ಗಳೂರು ನಗರದಿ೦ದ ವೀಕೆಂಡ್ ಕಳೆಯಲು ಹಲವರು ನಂದಿಬೆಟ್ಟಕ್ಕೆ ತೆರಳುತ್ತಾರೆ. [ನಂದಿಬೆಟ್ಟದ ಬಗ್ಗೆ ಹೆಚ್ಚಿನ ಮಾಹಿತಿ]












Click it and Unblock the Notifications